ನವದೆಹಲಿ: ದೇಶದಲ್ಲಿ ಅಶ್ಲೀಲ ವಿಡಿಯೋ ಕಾಲ್ ಮಾಡಿ, ಆ ಕಾಲ್ ರೆಕಾರ್ಡ್ ಮುಂದಿಟ್ಟುಕೊಂಡು ಜನರಿಂದ ಸುಲಿಗೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮೆಸೆಂಜರ್ ಅನ್ನು ಈ ಕೆಲಸಕ್ಕೆ ಖದೀಮರು ಬಳಸಿಕೊಳ್ಳುತ್ತಿದ್ದಾರೆ.
ದೆಹಲಿ ವಿವಿಯಲ್ಲಿ ಉಪನ್ಯಾಸಕರಾಗಿ ವೃತ್ತಿ ನಿರ್ವಹಿಸುತ್ತಿರುವ ಗೌರವಾನ್ವಿತ ವ್ಯಕ್ತಿಗೆ ಒಂದು ದಿನ ಫೇಸ್ ಬುಕ್ ಮೆಸೆಂಜರ್ ನಿಂದ ಕರೆ ಬರುತ್ತದೆ. ಕಾಲ್ ರಿಸೀವ್ ಮಾಡಿದರೆ ಅತ್ತ ಕಡೆ ಯುವತಿಯೋರ್ವಳು ಬೆತ್ತಲೆಯಾಗಿ ನಿಂತು ಮಾತಾಡುತ್ತಿದ್ದಳು. ಒಡನೆಯೇ ಮುಜುಗರದಿಂದ ಉಪನ್ಯಾಸಕ ಕಾಲ್ ಕಟ್ ಮಾಡಿದ್ದರು. ಆದರೆ ಅಷ್ಟರವೇಳೆಗೆ ಕೆಲವೇ ಸೆಕೆಂಡುಗಳ ಕಾಲ ಉಪನ್ಯಾಸಕ ಬೆತ್ತಲೆ ಹುಡುಗಿಯೊಡನೆ ಸಂಭಾಷಿಸುತ್ತಿರುವ ವಿಡಿಯೊವನ್ನು ರೆಕಾರ್ಡ್ ಮಾಡಿದ್ದ ವಂಚಕರು ಆ ವಿಡಿಯೋವನ್ನು ಉಪನ್ಯಾಸಕರಿಗೆ ಕಳಿಸಿದರು.
5 ನಿಮಿಷಗಳಲ್ಲಿ 20,000 ರೂ. ಗಳನ್ನು ಡಿಜಿಟಲ್ ಪೇಮೆಂಟ್ ಮಾಡಬೇಕು ಇಲ್ಲವಾದರೆ ಈ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡುವುದಾಗಿ ಬೆದರಿಕೆಯೊಡ್ಡಲಾಯಿತು. ಉಪನ್ಯಾಸಕರು ಅವರನ್ನು ಬ್ಲಾಕ್ ಮಾಡಿದಾಗ ಮತ್ತೊಂದು ನಂಬರ್ ನಿಂದ ಬೆದರಿಕೆ ಕರೆ ಬಂದಿತು. ನಂತರ ಈ ಬಗ್ಗೆ ಆ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದರು.
ಈ ಬಗೆಯ ವಂಚನೆಯ ಕೇಂದ್ರ ಸ್ಥಾನ ರಾಜಸ್ಥಾನ ಎಂಬುದು ತಿಳಿದುಬಂಡಿದೆ. ಈ ಹಿಂದೆ ಡಿಜಿಟಲ್ ಪೇಮೆಂಟ್, ಕ್ರೆಡಿಟ್ ಕಾರ್ಡ್, ಎಟಿಎಂ ಪಾಸ್ವರ್ಡ್ ಮತ್ತಿತರ ಮಾಹಿತಿ ಪಡೆದು ಚಂಚಿಸುತ್ತಿದ್ದ ತಂಡವೇ ಇದೀಗ ಈ ಹೊಸ ಅಶ್ಲೀಲ ಮಾರ್ಗ ಹಿಡಿದಿದೆ ಎನ್ನಲಾಗುತ್ತಿದೆ. ಈವರೆಗೆ ಪೊಲೀಸರು ಒಟ್ಟು 36 ಗ್ಯಾಂಗ್ ಗಳಿಗೆ ಸೇರಿದ 600ಕ್ಕೂ ಹೆಚ್ಚು ಮಂದಿಯನ್ನು ಇದೇ ಪ್ರಕರಣದಡಿ ಬಂಧಿಸಿದ್ದಾರೆ.