ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಮೊದಲ ಹಂತದ ಬೋರ್ಡ್ ಪರೀಕ್ಷೆಗಳು ನಡೆಯುವ ಸಮಯದಲ್ಲಿ ಶಾಲಾ ಆವರಣದಲ್ಲಿ ಪಡಿತರ ವಿತರಣೆ, ಲಸಿಕೆ ನೀಡಿಕೆ ಸೇರಿದಂತೆ ಎಲ್ಲ ಬಗೆಯ ಸಾರ್ವಜನಿಕ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ದೆಹಲಿಯ ಶಿಕ್ಷಣ ನಿರ್ದೇಶನಾಲಯ (ಡಿಒಇ) ಸುತ್ತೋಲೆ ಹೊರಡಿಸಿದೆ.
ಸಿಬಿಎಸ್‌ಇ 10 ಮತ್ತು 12ನೇ ತರಗತಿಯ 'ಮೈನರ್' ವಿಷಯಗಳ ಪರೀಕ್ಷೆಗಳು ಕ್ರಮವಾಗಿ ಇದೇ 17 ಮತ್ತು 16ರಿಂದ ಹಾಗೂ 'ಮೇಜರ್' ವಿಷಯಗಳ ಪರೀಕ್ಷೆಗಳು ಕ್ರಮವಾಗಿ ನವೆಂಬರ್ 30 ಮತ್ತು ಡಿಸೆಂಬರ್ 1ರಿಂದ ಆರಂಭವಾಗಲಿವೆ. 9 ಮತ್ತು 11ನೇ ತರಗತಿಯ ಮಧ್ಯ ವಾರ್ಷಿಕ ಪರೀಕ್ಷೆಗಳು ಡಿಸೆಂಬರ್ 1ರಿಂದ ಆರಂಭವಾಗಲಿವೆ. ಈ ಎಲ್ಲ ಪರೀಕ್ಷೆಗಳು 'ಆಫ್‌ಲೈನ್'ನಲ್ಲಿ ನಡೆಯಲಿವೆ.
ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಹಾಗೂ ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡಲು ಎಲ್ಲ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ಮುಖ್ಯಸ್ಥರು ಶಾಲಾ ಆವರಣದಲ್ಲಿ ಸಾರ್ವಜನಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು ಎಂದು ಡಿಇಒ ಸುತ್ತೋಲೆಯಲ್ಲಿ ಹೇಳಿದೆ.
ಶಾಲಾ ಆವರಣದೊಳಗೆ ಮಾಸ್ಕ್ ಹಾಕಿಕೊಳ್ಳಬೇಕು. ಸ್ಯಾನಿಟೈಸರ್ ಲಭ್ಯವಿರಬೇಕು. ಶುಚಿತ್ವ ಕಾಯ್ದುಕೊಳ್ಳಬೇಕು. ಅಲ್ಲದೆ ಕೋವಿಡ್ 19 ಅನ್ನು ತಡೆಗಟ್ಟಲು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.