ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ಸ್ಥಗಿತಗೊಳಿಸಲಾಗಿದ್ದ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ (ಎಂಪಿ ಲ್ಯಾಡ್ಸ್) ನ್ನು ಮರುಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ನ.11 ರಂದು ಅನುಮೋದನೆ ನೀಡಿದೆ.
ಕೇಂದ್ರ ಸಚಿವ ಸಂಪುಟದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವ ಅನುರಾಗ್ ಠಾಕೂರ್, 2021-22 ರ ಉಳಿದ ಆರ್ಥಿಕ ವರ್ಷಕ್ಕೆ ಯೋಜನೆಯನ್ನು ಮರುಸ್ಥಾಪಿಸಲಾಗಿದೆ. 2025-26 ವರೆಗೂ ಯೋಜನೆ ಮುಂದುವರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
2021-22 ರ ಉಳಿದ ಅವಧಿಗೆ ಮೊದಲ ಕಂತಿನಲ್ಲಿ 2 ಕೋಟಿ ರೂಪಾಯಿ ಪ್ರತಿ ಸಂಸದರ ಕ್ಷೇತ್ರಕ್ಕೆ ನೀಡಲಾಗುತ್ತದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
2022-23 ರಿಂದ 2025-26 ವರೆಗೆ ಪ್ರತಿ ವರ್ಷಕ್ಕೆ ಓರ್ವ ಸಂಸದನ ಕ್ಷೇತ್ರಕ್ಕೆ 5 ಕೋಟಿ ರೂಪಾಯಿಗಳನ್ನು ಎರಡು ಕಂತಿನಲ್ಲಿ ತಲಾ 2.5 ಕೋಟಿ ರೂಪಾಯಿಗಳಂತೆ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
2020-21 ಹಾಗೂ 2021-22 ರ ಅವಧಿಯ ಎಂಪಿ ಲ್ಯಾಡ್ಸ್ ನ್ನು ಕೊರೋನಾ ಸಾಂಕ್ರಾಮಿಕವನ್ನು ನಿಭಾಯಿಸಬೇಕಿದ್ದರಿಂದ ವೈದ್ಯಕೀಯ ವೆಚ್ಚಗಳನ್ನು ಸರಿದೂಗಿಸಲು ಸ್ಥಗಿತಗೊಳಿಸಲಾಗಿತ್ತು.