ನವದೆಹಲಿ: ಭಾರತೀಯ ಪ್ರಯಾಣಿಕರಿಗೆ ಆಸ್ಟ್ರೇಲಿಯಾ ಸರ್ಕಾರ ಸಿಹಿಸುದ್ದಿ ನೀಡಿದೆ. ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆಯನ್ನು ಅನುಮೋದಿತ ಲಸಿಕೆಗಳ ಪಟ್ಟಿಗೆ ಸೇರಿಸಲಾಗಿದೆ. ಕೊವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಂಡ ಭಾರತೀಯರು ಆಸ್ಟ್ರೇಲಿಯಾ ಪ್ರವೇಶಿಸುವುದಕ್ಕೆ ಅನುಮತಿ ನೀಡಲಾಗಿದೆ.
ಆಸ್ಟ್ರೇಲಿಯಾ ಪ್ರಯಾಣಕ್ಕೆ ತೆರಳುವ ಭಾರತೀಯರು ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುವ ಕೊವಿಶೀಲ್ಡ್ ಲಸಿಕೆಯನ್ನು ಪಡೆದುಕೊಂಡಿರಬೇಕು ಎಂದು ಕಳೆದ ತಿಂಗಳು ಆಸ್ಟ್ರೇಲಿಯಾದ ವೈದ್ಯಕೀಯ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿತ್ತು. ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಜೊತೆಗೆ ಸಿನೋಫಾರ್ಮಾದ ಬಿಬಿಐಬಿಪಿ-ಸಿಓಆರ್ ವಿ ಲಸಿಕೆಯನ್ನು ಪಟ್ಟಿಗೆ ಸೇರಿಸಿತ್ತು.ಆಸ್ಟ್ರೇಲಿಯಾ ಪ್ರವೇಶಕ್ಕೆ ಈ ಲಸಿಕೆ ಪಡೆದಿರಬೇಕು
ಭಾರತದಲ್ಲಿ ಉತ್ಪಾದಿಸುವ ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ, ಚೀನಾದಲ್ಲಿ ಉತ್ಪಾದಿಸುವ ಸಿನೋಫಾರ್ಮ್ ಸಂಸ್ಥೆಯ BBIBP-CorV ಲಸಿಕೆಯನ್ನು ಅನುಮೋದಿತ ಲಸಿಕೆಗಳ ಪಟ್ಟಿಗೆ ಸೇರಿಸುವುದಕ್ಕೂ ಮೊದಲು ಮತ್ತೆರೆಡು ಲಸಿಕೆಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿತ್ತು. ಪ್ರಮುಖವಾಗಿ ಚೀನಾದ ಸಿನೋವ್ಯಾಕ್ ಸಂಸ್ಥೆ ಉತ್ಪಾದಿಸುವ ಕೊರೊನಾವ್ಯಾಕ್ ಮತ್ತು ಭಾರತದಲ್ಲಿ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುವ ಕೊವಿಶೀಲ್ಡ್ ಲಸಿಕೆಯನ್ನು ಅನುಮೋದಿತ ಲಸಿಕೆಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿತ್ತು. ಇದರ ಅರ್ಥ ಭಾರತ ಮತ್ತು ಚೀನಾದ ಪ್ರಜೆಗಳು ಆಸ್ಟ್ರೇಲಿಯಾ ಪ್ರವೇಶಿಸುವುದಕ್ಕೂ ಮೊದಲು ಅಧಿಕೃತ ಲಸಿಕೆಗಳನ್ನು ಪಡೆದುಕೊಂಡಿರಬೇಕು.
ಕ್ವಾರೆಂಟೈನ್ ಜೊತೆ ನೆಗೆಟಿವ್ ವರದಿ ಕಡ್ಡಾಯ
ಆಸ್ಟ್ರೇಲಿಯಾ ಪ್ರವೇಶಿಸಲು ಸರ್ಕಾರದ ಅಧಿಕೃತ ಲಸಿಕೆಗಳ ಪಟ್ಟಿಯಲ್ಲಿ ಗುರುತಿಸಲಾದ ಕೊವಿಡ್-19 ಲಸಿಕೆಯನ್ನು ಪಡೆದುಕೊಂಡಿರಬೇಕು. ಇಲ್ಲದಿದ್ದರೆ ಪ್ರಯಾಣ ಆರಂಭಿಸುವುದಕ್ಕೂ ಮೊದಲು ಕೊರೊನಾವೈರಸ್ ನೆಗೆಟಿವ್ ವರದಿ ಸಲ್ಲಿಸಬೇಕು, ಇದರ ಜೊೆತೆಗೆ ಕ್ವಾರೆಂಟೈನ್ ಅಲ್ಲಿರುವುದು ಕಡ್ಡಾಯಗೊಳಿಸಲಾಗಿದೆ.
ಕೊವ್ಯಾಕ್ಸಿನ್ ಲಸಿಕೆ ಪರಿಣಾಮ ಎಷ್ಟು?
ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯು ಕೊರೊನಾವೈರಸ್ ವಿರುದ್ಧ ಶೇ.77.8ರಷ್ಟು ಪರಿಣಾಮಕಾರಿಯಾಗಿದೆ. ಅಲ್ಲದೇ ಕೊವಿಡ್-19 ರೂಪಾಂತರ ಡೆಲ್ಟಾ ವೈರಸ್ ವಿರುದ್ಧ ಶೇ.65.2ರಷ್ಟು ಪರಿಣಾಮಕಾರಿಯಾಗಿದೆ. ಜೂನ್ ತಿಂಗಳಿನಲ್ಲಿ 3ನೇ ಹಂತದ ವೈದ್ಯಕೀಯ ಪ್ರಯೋಗಗಳಿಗೆ ಸಂಬಂಧಿಸಿದಂತೆ ಅಂತಿಮ ವಿಶ್ಲೇಷಣೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಭಾರತ್ ಬಯೋಟೆಕ್ ಕಂಪನಿ ಹೇಳಿದೆ.
ನವೆಂಬರ್ 3ರಂದು ತಾಂತ್ರಿಕ ಸಲಹಾ ಸಮಿತಿ ಅಂತಿಮ ಸಭೆ
ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆಗೆ ಶಿಫಾರಸ್ಸು ಮಾಡಲು ತಾಂತ್ರಿಕ ಸಲಹಾ ಸಮಿತಿಗೆ ಭಾರತ್ ಬಯೋಟೆಕ್ ಸಂಸ್ಥೆಯು ನಿರಂತರ ಹಾಗೂ ಕ್ಷಿಪ್ರಗತಿಯಲ್ಲಿ ಅಗತ್ಯ ದತ್ತಾಂಶವನ್ನು ಸಲ್ಲಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಉತ್ತಮ ಗುಣಮಟ್ಟದ ಲಸಿಕೆಯನ್ನು ಉತ್ಪಾದಿಸುವ ಭಾರತೀಯ ಉದ್ಯಮದ ಮೇಲೆ ವಿಶ್ವಾಸವಿದೆ. ಕೊವ್ಯಾಕ್ಸಿನ್ ಲಸಿಕೆಯನ್ನು ತುರ್ತು ಬಳಕೆ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡುವ ತಾಂತ್ರಿಕ ಸಲಹಾ ಸಮಿತಿಯು ಮುಂದಿನ ವಾರದಲ್ಲಿ ಅಂತಿಮ ಸುತ್ತಿನ ಸಭೆ ನಡೆಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ಕೊರೊನಾವೈರಸ್ ಸೋಂಕಿನ ವಿರುದ್ಧ ತುರ್ತು ಬಳಕೆಯ ಲಸಿಕೆಗಳ ಪಟ್ಟಿಗೆ ಸೇರಿಸಲು ಆಸಕ್ತಿ ತೋರಿತ್ತು. ಈ ಸಂಬಂಧ ಕಂಪನಿಯು 2021ರ ಏಪ್ರಿಲ್ 19ರಂದು ವಿಶ್ವ ಆರೋಗ್ಯ ಸಂಸ್ಥೆಗೆ ಮನವಿ ಮಾಡಿಕೊಂಡಿದ್ದು, ಅಗತ್ಯ ದಾಖಲೆಗಳೊಂದಿಗೆ ಅನುಮೋದನೆ ಶಿಫಾರಸ್ಸು ಮಾಡುವಂತೆ ಅರ್ಜಿಯಲ್ಲಿ ಸಲ್ಲಿಸಲಾಗಿತ್ತು.
ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅಂತಿಮ ಅನುಮೋದನೆಗೆ ಶಿಫಾರಸ್ಸು ಮಾಡುವುದಕ್ಕೂ ಮೊದಲು ಲಸಿಕೆ ಬಳಸುವುದರಿಂದ ಆಗುವ ಅಪಾಯ ಮತ್ತು ಪ್ರಯೋಜನದ ಕುರಿತು ಹೆಚ್ಚಿನ ಮಾಹಿತಿ ನೀಡುವಂತೆ ತಾಂತ್ರಿಕ ಸಲಹಾ ಸಮಿತಿಯು ಕಂಪನಿಗೆ ಸೂಚಿಸಿತ್ತು. ನವೆಂಬರ್ 3ರಂದು ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವುದಕ್ಕೆ ಸಂಬಂಧಿಸಿದಂತೆ ಅಂತಿಮ ಮೌಲ್ಯಮಾಪನ ಪ್ರಕ್ರಿಯೆ ನಡೆಸಲಿದೆ. ತದನಂತರದಲ್ಲಿ ಲಸಿಕೆಯ ತುರ್ತು ಬಳಕೆ ಕುರಿತು ಅನುಮೋದನೆ ನೀಡಬೇಕೇ ಬೇಡವೇ ಎಂಬ ಬಗ್ಗೆ ಅಧಿಕೃತವಾಗಿ ತಿಳಿಸಲಿದೆ ಎಂದು ಸಮಿತಿ ಹೇಳಿತ್ತು.