ತಿರುವನಂತಪುರ: ವಕ್ಫ್ ಮಂಡಳಿ ನೇಮಕಾತಿ ನಿರ್ಧಾರದ ವಿರುದ್ಧ ಮುಸ್ಲಿಂ ಸಂಘಟನೆಗಳು ಧ್ವನಿಯೆತ್ತಿದೆ. ನೇಮಕಾತಿಯನ್ನು ಪಿಎಸ್‍ಸಿ ಗೆ ವಹಿಸುವ ನಿರ್ಧಾರವನ್ನು ಸರ್ಕಾರ ಹಿಂಪಡೆಯಬೇಕು ಎಂದು ಸಮುದಾಯದ ಮುಖಂಡರು ಒತ್ತಾಯಿಸಿರುವರು. ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ನೇರ ಮುಷ್ಕರ ಹಾಗೂ ಕಾನೂನು ಹೋರಾಟ ನಡೆಸಲಾಗುವುದು ಎಂದು ಸಂಘಟನೆಗಳು ತಿಳಿಸಿವೆ.
ಕಂಠಪುರಂ ಎ.ಪಿ.ಅಬೂಬಕರ್ ನೇತೃತ್ವದ ಕೇರಳ ಮುಸ್ಲಿಂ ಜಮಾತ್ ಹೊರತುಪಡಿಸಿ ಉಳಿದೆಲ್ಲ ಮುಸ್ಲಿಂ ಸಂಘಟನೆಗಳು ಮಂಡಳಿಯ ನೇಮಕದ ಕುರಿತು ಚರ್ಚಿಸಲು ಸಭೆ ನಡೆಸಿದ್ದವು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ತಳೆದಿರುವ ನಿಲುವಿಗೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು.
ಧರ್ಮದ ಹೆಸರಿನಲ್ಲಿ ಅನ್ಯಧರ್ಮೀಯ ಅಧಿಕಾರಿಗಳನ್ನು ನೇಮಿಸುವುದರಿಂದ ವಕ್ಫ್ ಬೋರ್ಡ್ ನಿರ್ಮೂಲನೆಯಾಗುತ್ತದೆ ಎಂಬುದು ಸಂಘಟನೆಗಳ ವಾದ. ಸರ್ಕಾರದ ನಿರ್ಧಾರ ಕೇಂದ್ರ ಕಾಯಿದೆಗೆ ವಿರುದ್ಧವಾಗಿದ್ದು, ವಕ್ಫ್ ಆಸ್ತಿ ದೇವರ ಆಸ್ತಿ ಎಂದು ಸಂಘಟನೆಗಳು ಹೇಳಿವೆ. ಅದನ್ನು ಧರ್ಮದವರು ನಿರ್ವಹಿಸಬೇಕು ಎಂದು ಸಾದಿಕಲಿ ಹೇಳಿರುವರು.