ಬದಿಯಡ್ಕ: ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಬದಿಯಡ್ಕ ಪ್ರಖಂಡ ಇವರ ನೇತೃತ್ವದಲ್ಲಿ ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಗೋಪೂಜೆ, ಧಾರ್ಮಿಕ ಸಭೆ ನಡೆಯಿತು.
ಗುರುವಾರ ಸಂಜೆ ಮಹಾಗಣಪತಿ ಭಟ್ ಅಳಕ್ಕೆ ಹಾಗೂ ಪುದುಕೋಳಿ ಶ್ರೀಕೃಷ್ಣ ಭಟ್ ಗೋಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಮಾತೃಮಂಡಳಿ ಹಾಗೂ ಶ್ರೀ ಉದನೇಶ್ವರ ಬಾಲಗೋಕುಲದ ವತಿಯಿಂದ ಭಜನೆ ಜರಗಿತು. ಆಗಮಿಸಿದ ಭಕ್ತಾದಿಗಳು ಗೋಗ್ರಾಸವನ್ನು ನೀಡಿ ಗೋವಿಗೆ ಆರತಿಯನ್ನು ಬೆಳಗಿ ನಮಸ್ಕರಿಸಿದರು. ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಬೌದ್ಧಿಕ್ ನಡೆಸಿಕೊಟ್ಟರು. ಅವರು ಮಾತನಾಡಿ ಗೋವು ನಮಗೆ ನೀಡುವ ಪ್ರತಿಯೊಂದು ವಸ್ತುವಿನಲ್ಲಿಯೂ ಅಪಾರವಾದ ಔಷಧೀೀಯ ಗುಣವಿದೆ. ಹಿರಿಯರ ಕಾಲದಿಂದಲೇ ಬಂದಂತಹ ಗೋವಿನೊಂದಿಗಿನ ಒಡನಾಟವನ್ನು ಹೆಚ್ಚಿಸಿಕೊಳ್ಳುವುದರಿಂದ ಆರೋಗ್ಯಪೂರ್ಣ ಜೀವನ ನಮ್ಮದಾಗಬಹುದು. ಪ್ರತೀ ಮನೆಯವರ ಮನಮನದಲ್ಲಿಯೂ ನಿತ್ಯ ಗೋಮಾತೆ ಪೂಜಿಸಲ್ಪಡಬೇಕು ಎಂದು ಅವರು ತಿಳಿಸಿದರು.
ವಿಹಿಂಪ ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಾರ್ಯವಾಹ ಗುಣಾಜೆ ಶಿವಶಂಕರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಭಾಗ ಸಂಘಚಾಲಕ ಗೋಪಾಲ ಚೆಟ್ಟಿಯಾರ್, ವಿಹಿಂಪ ಪ್ರಧಾನರಾದ ಉಳುವಾನ ಶಂಕರ ಭಟ್, ಮೀರಾ ಆಳ್ವ, ಸಂಕಪ್ಪ ಭಂಡಾರಿ, ಬ್ಲಾಕ್ ಪಂಚಾಯಿತಿ ಸದಸ್ಯೆ ಅಶ್ವಿನಿ ಮೊಳೆಯಾರು, ಗ್ರಾಪಂ ಸದಸ್ಯೆ ಸ್ವಪ್ನಾ, ಬದಿಯಡ್ಕ ಪ್ರಖಂಡ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.