ನವದೆಹಲಿ: ಚೀನಾ ದಶಕಗಳಿಂದ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಕಟ್ಟಡ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಹೇಳಿದೆ.
ನವದೆಹಲಿ: ಚೀನಾ ದಶಕಗಳಿಂದ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಕಟ್ಟಡ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಹೇಳಿದೆ.
ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ಬಗ್ಗೆ ಮಾತನಾಡಿದ್ದು, ಚೀನಾದಿಂದ ಭಾರತ-ಚೀನಾ ಗಡಿ ಭಾಗದಲ್ಲಿ ಪ್ರಮುಖವಾಗಿ ಈಶಾನ್ಯ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆಗಳ ಬಗ್ಗೆ ಉಲ್ಲೇಖವಿರುವ, ಯುಎಸ್ ಕಾಂಗ್ರೆಸ್ ಗೆ ಸಲ್ಲಿಕೆಯಾಗಿರುವ ಅಮೆರಿಕದ ರಕ್ಷಣಾ ಇಲಾಖೆಯ ವರದಿಯನ್ನು ಗಮನಿಸಿದ್ದೇವೆ.
"ತನ್ನ ಭಾಗದಲ್ಲಿನ ಅಕ್ರಮ ಅತಿಕ್ರಮಣವನ್ನು ಭಾರತ ಎಂದಿಗೂ ಒಪ್ಪಿಲ್ಲ, ಚೀನಾದ ಅಸಮರ್ಥನೀಯ ಹಕ್ಕು ಪ್ರತಿಪಾದನೆಗಳನ್ನೂ ಭಾರತ ಅಂಗೀಕರಿಸಿಲ್ಲ" ಎಂದು ವಕ್ತಾರರು ಹೇಳಿದ್ದಾರೆ.
ಚೀನಾದ ಈ ರೀತಿಯ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಭಾರತ ಎಂದಿಗೂ ತೀವ್ರ ಪ್ರತಿರೋಧ, ಪ್ರತಿಭಟನೆಯನ್ನು ರಾಜತಾಂತ್ರಿಕ ವ್ಯವಸ್ಥೆಯ ಮೂಲಕ ವ್ಯಕ್ತಪಡಿಸಿದೆ, ಇದೇ ಕೆಲಸವನ್ನು ಮುಂದೆಯೂ ಮಾಡಲಿದೆ ಎಂದು ಅರಿಂದಮ್ ಬಗಚಿ ಹೇಳಿದ್ದಾರೆ.
"ಗಡಿ ಭಾಗಗಳಲ್ಲಿ ರಸ್ತೆಗಳ ನಿರ್ಮಾಣ, ಸೇತುವೆಗಳ ನಿರ್ಮಾಣಗಳಂತಹ ಕೆಲಸಗಳ ಮೂಲಕ ಮೂಲಸೌಕರ್ಯವನ್ನು ಹೆಚ್ಚಿಸಲಾಗುತ್ತಿದೆ. ಇದರಿಂದ ಸ್ಥಳೀಯ ಜನತೆಗೆ ಹೆಚ್ಚು ಅಗತ್ಯವಿದ್ದ ಸಂಪರ್ಕಸಾಧನ ಲಭ್ಯವಾದಂತಾಗಿದೆ" ಎಂದು ಅವರು ಹೇಳಿದ್ದಾರೆ.
ಗಡಿಯಾದ್ಯಂತ ಮೂಲಸೌಕರ್ಯ ಹೆಚ್ಚಿಸುವುದಕ್ಕೆ, ಅರುಣಾಚಲ ಪ್ರದೇಶವೂ ಸೇರಿದಂತೆ ಗಡಿ ಪ್ರದೇಶದಲ್ಲಿರುವ ಜನತೆಯ ಜೀವನ ಸುಧಾರಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.
ಭಾರತದ ಭದ್ರತೆಗೆ ಸಂಬಂಧಿಸಿದ ಎಲ್ಲಾ ಬೆಳವಣಿಗೆಗಳ ಮೇಲೆಯೂ ಸರ್ಕಾರ ನಿರಂತರವಾಗಿ ಕಣ್ಗಾವಲು ಇಟ್ಟಿರುತ್ತದೆ ಎಂದು ಬಗಚಿ ಇದೇ ವೇಳೆ ಹೇಳಿದ್ದಾರೆ.