ಉಪ್ಪಳ: ಮುಳಿಂಜದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಹಬ್ಬದ ಮಹತ್ವ ಮತ್ತು ಸಹೋದರತ್ವದ ಆಶಯ ತಿಳಿಸುವ ಉದ್ದೇಶದಿಂದ ನಡೆದ ಕಾರ್ಯಕ್ರಮವನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿ ಉಪ್ಪಳ ಟೌನ್ ವಾರ್ಡಿನ ಸದಸ್ಯ ಶರೀಫ್ ಎ ಉದ್ಘಾಟಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ದೀಪಾವಳಿ ಹಬ್ಬದ ಔಚಿತ್ಯವನ್ನು ಮಕ್ಕಳಿಗೆ ತಿಳಿ ಹೇಳಿದರು. ಬಿ.ಆರ್.ಸಿ ತರಬೇತುದಾರ ಜೋಯ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ, ಶಾಲಾ ಹಿರಿಯ ಶಿಕ್ಷಕಿ ಪುಷ್ಪಲತ ಶುಭ ಹಾರೈಸಿದರು. ಶಾಲಾ ಶಿಕ್ಷಕ ರಿಯಾಸ್ ಸ್ವಾಗತಿಸಿ, ಅಧ್ಯಾಪಕ ಅಬ್ದುಲ್ ಬಶೀರ್ ವಂದಿಸಿದರು. ದೀಪಾವಳಿ ನಿಮಿತ್ತ ಗೂಡುದೀಪ ರಚನೆಯನ್ನು ಪ್ರಾತ್ಯಕ್ಷಿಕೆ ಮೂಲಕ ತಯಾರಿಸಿ ತೋರಿಸಲಾಯಿತು. ಬಳಿಕ ಹಣತೆ ಹಚ್ಚಿ ಹಾಡು ಹಾಡಿ ಸಂಭ್ರಮಿಸಲಾಯಿತು. ರೆಹಮತ್ ಟೀಚರ್ ನೇತೃತ್ವದಲ್ಲಿ ಗೂಡುದೀಪ ತಯಾರಿಸಲಾಯಿತು. ಫಿರೋಜ್ ಸಫ್ವ್ವಾನ ಮತ್ತು ಅಬ್ಸಾ ಟೀಚರ್ ಅವರಿಗೆ ಬೆಂಬಲವನ್ನಿತ್ತು ಅಂದವಾಗಿ ನಡೆಯುವಲ್ಲಿ ಸಹಕರಿಸಿದರು. ಬಳಿಕ ಸಿಹಿತಿಂಡಿ ಹಂಚಲಾಯಿತು.