ಕಾಸರಗೋಡು: ಪ್ರವಾಸಿ(ಆನಿವಾಸಿ)ಭದ್ರತೆ ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆ ಮತ್ತು ಸಾಲ ವಿತರಣೆ ಕಾರ್ಯಕ್ರಮ ಜರುಗಿತು.
ಕೋವಿಡ್ ಅವಧಿಯಲ್ಲಿ ನೌಕರಿ ಕಳೆದುಕೊಂಡು ಊರಿಗೆ ಮರಳಿರುವ ಆನಿವಾಸಿ ಕೇರಳಿಗರಿಗಾಗಿ ಕುಟುಂಬಶ್ರೀ ಮಿಷನ್ ಮತ್ತು ನೋರ್ಕಾ ರೂಟ್ಸ್ ನೇತೃತ್ವದಲ್ಲಿ ಆರಂಭಿಸಲಾದ ಯೋಜನೆ ಇದಾಗಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಮಧೂರು ಪಂಚಾಯತ್ ಸಿ.ಡಿ.ಎಸ್. ಅಧ್ಯಕ್ಷೆ ಕೆ.ರೇಣುಕಾ, ಚೆಂಗಳ ಪಂಚಾಯತ್ ಸಿ.ಡಿ.ಎಸ್. ಅಧ್ಯಕ್ಷೆ ಕೆ.ಎ.ಖದೀಜಾ ಸಾಲದ ಮೊಬಲಗು ಪಡೆದುಕೊಂಡರು. ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ.ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ನೋರ್ಕಾ ರೂಟ್ಸ್ ಜಿಲ್ಲಾ ಕಚೇರಿ ಸಹಾಯಕ ಸಂಚಾಲಕರಾದ ಪ್ರಕಾಶ್ ಪಾಲಾಯಿ, ಡಿ.ಹರಿದಾಸ್, ಸಿ.ಎಚ್.ಇಕ್ಬಾಲ್, ಪ್ರಭಾರ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಕೃಪನಾ ಮೊದಲಾದವರು ಉಪಸ್ಥಿತರಿದ್ದರು. ಯೋಜನೆಯ ಅಂಗವಾಗಿ ಸಲ್ಲಿಕೆಯಾದವುಗಳಲ್ಲಿ 42 ಅರ್ಜಿಗಳಿಗೆ ಅಂಗೀಕಾರ ನೀಡಲಾಗಿದೆ.