ವಾಷಿಂಗ್ಟನ್: ಅರುಣಾಚಲ ಪ್ರದೇಶದ ವಿವಾದಿತ ಪ್ರದೇಶದಲ್ಲಿ ಬೃಹತ್ ಗ್ರಾಮವನ್ನು ಚೀನಾ ನಿರ್ವಿುಸಿದೆ. ಈ ಮೂಲಕ ಅದು ವಾಸ್ತವ ಗಡಿ ರೇಖೆಯನ್ನು ವಿಸ್ತರಿಸಿಕೊಳ್ಳುವ ಪ್ರಯತ್ನ ಮಾಡಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆಯ ವಾರ್ಷಿಕ ವರದಿ 'ಮಿಲಿಟರಿ ಆಂಡ್ ಸೆಕ್ಯುರಿಟಿ ಡೆವಲಪ್ವೆುಂಟ್ಸ್ ಇನ್ವಾಲ್ವಿಂಗ್ ದ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ 2021' ತಿಳಿಸಿದೆ.
ಭಾರತದ ಗಡಿಭಾಗದಲ್ಲಿ ಉಂಟಾಗಿರುವ ಬಿಕ್ಕಟ್ಟು ಸರಿಪಡಿಸಲು ಸರಣಿ ಮಾತುಕತೆ ನಡೆಸುತ್ತಿರುವುದಾಗಿ ಚೀನಾ ಹೇಳಿಕೊಂಡಿದೆ. ಆದಾಗ್ಯೂ, ಚೀನಾ ಸೇನೆ 2020ರ ಮೇ ತಿಂಗಳಿಂದ ಸರಣಿ ಘರ್ಷಣೆ ಮುಂದುವರಿಸಿದೆ. ಗಲ್ವಾನ್ ಸಂಘರ್ಷದೊಂದಿಗೆ ಇದು ಆರಂಭವಾಗಿದೆ. ಇದರಲ್ಲಿ ಭಾರತದ 21 ಯೋಧರು ಹುತಾತ್ಮರಾದರೆ, ಚೀನಾ ಹುತಾತ್ಮರ ಸಂಖ್ಯೆಯನ್ನು ಘೋಷಿಸಿಲ್ಲ ಎಂಬ ಅಂಶವನ್ನು ವರದಿ ಉಲ್ಲೇಖಿಸಿದೆ.
ಭಾರತದ ಅಧೀನ ಇರುವ ಭೌಗೋಳಿಕ ಪ್ರದೇಶದೊಳಕ್ಕೆ ಚೀನಾ ಸೇನೆ ಅತಿಕ್ರಮಣ ಮುಂದುವರಿದಿದೆ. ಎಲ್ಎಸಿಯಲ್ಲಿ ವಿವಿಧ ಕಡೆ ಇಂತಹ ಅತಿಕ್ರಮಣ ವರದಿಯಾಗಿದೆ. ಇದಕ್ಕೆ ಹೊರತಾಗಿ, ಟಿಬೆಟ್ ಮತ್ತು ಕ್ಸಿನ್ಜಿಯಾಂಗ್ ಸೇನಾ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮೀಸಲು ಸೇನೆಯನ್ನು ಪಿಎಲ್ಎ ನಿಯೋಜಿಸಿದೆ. ಗಡಿಬಿಕ್ಕಟ್ಟು ಬಗೆಹರಿಸಲು ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕವಾಗಿ ಮತ್ತು ಸೇನಾ ಮಟ್ಟದ ಮಾತುಕತೆ ಯಾವುದೇ ಫಲ ಕೊಟ್ಟಿಲ್ಲ. ಚೀನಾ ಭೌಗೋಳಿಕ ಅತಿಕ್ರಮಣ ಮುಂದುವರಿಸಿದ್ದು, ಎಲ್ಎಸಿಯನ್ನು ವಿಸ್ತರಿಸುವ ಪ್ರಯತ್ನ ಮುಂದುವರಿಸಿದೆ.
ಗಡಿ ಗ್ರಾಮ ರಚನೆ: ಕಳೆದ ವರ್ಷ ಅರುಣಾಚಲ ಪ್ರದೇಶದಲ್ಲಿ ತ್ಸರಿ ನದಿ ದಂಡೆಯ ವಿವಾದಿತ ಪ್ರದೇಶದಲ್ಲಿ ಚೀನಾ ಸರ್ಕಾರ ಸೇನಾ ಗ್ರಾಮವನ್ನು ನಿರ್ವಿುಸಿದೆ. ಭಾರತೀಯ ಅಧಿಕಾರಿಗಳ ಪ್ರಕಾರ ಈ ಗ್ರಾಮ ಉಭಯ ಉದ್ದೇಶದ್ದು. ಆದರೆ ಚೀನಾ ಇದನ್ನು ಸೇನಾ ಕಾರ್ಯಕ್ಕೂ ಬಳಸಿದೆ. 100 ಮನೆಗಳ ನಾಗರಿಕ ಗ್ರಾಮ ಇದಾಗಿದ್ದು, ಟಿಬೆಟ್ನ ಸ್ವಾಯತ್ತ ಪ್ರದೇಶ ಮತ್ತು ಭಾರತದ ಅರುಣಾಚಲ ಪ್ರದೇಶದ ನಡುವಿನ ವಿವಾದಿತ ಪ್ರದೇಶದಲ್ಲಿದೆ. ಈ ಗ್ರಾಮಕ್ಕೆ ಸಮೀಪದ ಮಿಗ್ಯುುಟನ್ ಎಂಬ ಪಟ್ಟಣದಿಂದ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಟೆಲಿಕಾಂ ಸೌಲಭ್ಯಗಳನ್ನೂ ಒದಗಿಸಲಾಗಿದೆ. ಎಲ್ಎಎಸಿಯಲ್ಲಿ ಭಾರತ ಪ್ರಚೋದನಕಾರಿಯಾಗಿ ವರ್ತಿಸುತ್ತಿದೆ ಎಂದು ಜಗತ್ತಿನೆದುರು ಚೀನಾ ಘೋಷಿಸುತ್ತಲೇ ಇದೆ. ಈ ನಡುವೆ, ಎಲ್ಎಸಿಯಲ್ಲಿ ಸೇನಾ ಚಟುವಟಿಕೆಯನ್ನು ಹೆಚ್ಚಿಸಿರುವುದು ಕೂಡ ಚೀನಾವೇ ಆಗಿದೆ ಎಂಬ ಅಂಶವನ್ನು ವರದಿ ಉಲ್ಲೇಖಿಸಿದೆ.
ಭಾರತವನ್ನು ಹಿಮ್ಮೆಟ್ಟಿಸುವ ಪ್ರಯತ್ನ: ಅಮೆರಿಕ ಮತ್ತು ಇತರ ಮುಂದುವರಿದ ರಾಷ್ಟ್ರಗಳೊಂದಿಗೆ ಹೆಚ್ಚಿನ ಸಂಪರ್ಕ ಬೆಳೆಸದಂತೆ ಭಾರತವನ್ನು ಹಿಮ್ಮೆಟ್ಟಿಸಲು ಚೀನಾ ನಾನಾ ಪ್ರಯತ್ನಗಳನ್ನು ಮಾಡುತ್ತಿದೆ. ವಿಶೇಷವಾಗಿ ಅಮೆರಿಕದ ಜತೆಗಿನ ಭಾರತದ ನಂಟು ಚೀನಾಕ್ಕೆ ಸಹಿಸಲಾಗುತ್ತಿಲ್ಲ. ಚೀನಾದ ಈ ನಡೆ ಸೇನಾ ಸಂಘರ್ಷಕ್ಕೆ ಮತ್ತು ಆರ್ಥಿಕ, ರಾಜತಾಂತ್ರಿಕ ಸಂಘರ್ಷಕ್ಕೂ ಕಾರಣವಾದೀತು ಎಂದು ವರದಿ ಎಚ್ಚರಿಸಿದೆ.
ಕಾಂಗ್ರೆಸ್ ಟೀಕೆ: ಪ್ರಧಾನಿ ಮೋದಿಯವರೇ ನಿಮ್ಮ 'ಕೆಂಗಣ್ಣ'ನ್ನು ಕಾಯಂ ಆಗಿ ಮುಚ್ಚಿಬಿಟ್ಟಿರಾ ಹೇಗೆ? ಎಂಬ ಸಂದೇಶದೊಂದಿಗೆ ಚೀನಾದ ಧ್ವಜದ ಫೋಟೋ ವನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ. ಇದಲ್ಲದೆ, 1.46 ನಿಮಿಷದ ವಿಡಿಯೋ ದೊಂದಿಗೆ ಮಿಸ್ಟರ್ 56, ಚೀನಾ ಬಗ್ಗೆ ನಿಮಗೇಕಿಷ್ಟು ಹೆದರಿಕೆ ಎಂದೂ ಕಾಂಗ್ರೆಸ್ ಕೆಣಕಿದೆ.
ಚೀನಾ ಮೊಂಡುತನ: ವಿವಾದಿತ ಪ್ರದೇಶಗಳಿಂದ ಭಾರತ ಅಂತರ ಕಾಯ್ದುಕೊಳ್ಳಲು ಸಿದ್ಧವಿದ್ದು, ಆರಂಭಿಕ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ, ಚೀನಾ ವಿವಾದಿತ ಪ್ರದೇಶದಿಂದ ಹಿಂದೆ ಸರಿದಿಲ್ಲ. ಅದು ಎಲ್ಎಸಿ ಅತಿಕ್ರಮಣ ಮುಂದುವರಿಸಿದ್ದು, ಸೇನಾ ನಿಯೋಜನೆ ಹೆಚ್ಚಿಸಿದೆ.
ಮೂರು ಉಪಗ್ರಹ ಉಡಾವಣೆ: ಸಿಚುವಾನ್ ಪ್ರಾಂತ್ಯದಿಂದ ಮೂರು ಹೊಸ ರಿಮೋಟ್ ಸೆನ್ಸಿಂಗ್ ಉಪಗ್ರಹಗಳನ್ನು ಚೀನಾ ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇವು ಯಾವೊಗಾನ್ 35 ಸರಣಿಯ ಉಪಗ್ರಹಗಳಾಗಿವೆ. ಲಾಂಗ್ ಮಾರ್ಚ್ -2ಡಿ ಉಡಾವಣಾ ವಾಹಕದ ಮೂಲಕ ಈ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗಿದೆ ಎಂದು ಕ್ಸಿನ್ಹುವಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಲಾಂಗ್ ಮಾರ್ಚ್ ಸರಣಿಯ ರಾಕೆಟ್ಗೆ ಇದು 396ನೇ ಯೋಜನೆಯಾಗಿತ್ತು. 2019ರ ಮಾರ್ಚ್ನಲ್ಲಿ ಚೀನಾದ ಲಾಂಗ್ ಮಾರ್ಚ್ -3ಬಿ ರಾಕೆಟ್ ಉಡಾವಣೆ ಮೂಲಕ 300ನೇ ಉಡಾವಣೆಯನ್ನು ಪೂರ್ಣಗೊಳಿಸಿತ್ತು.
ಚೀನಾ ಸೇನಾಬಲ
- ಭಾರತದ ಜತೆಗಿನ ಸಂಘರ್ಷಕ್ಕೆ ಸೇನಾ ತರಬೇತಿ ಹೆಚ್ಚಳ, ಯುದ್ಧೋಪಕರಣ ಸ್ಥಾಪನೆ ವೃದ್ಧಿ
- 2020ರಲ್ಲಿ ಸ್ವಯಂಚಾಲಿತ ಹೊವಿಟ್ಜರ್ ಪಿಸಿಎಲ್ 171ಗಳೊಂದಿಗೆ ಸೇನಾ ಬಲ ಹೆಚ್ಚಿಸಿದ್ದು
- ತೈವಾನ್ ಜತೆಗಿನ ಸಂಘರ್ಷಕ್ಕೂ ಪಿಎಲ್ಎ ಸಜ್ಜಾಗುತ್ತಿದೆ
- ಜಗತ್ತಿನ ಅತಿದೊಡ್ಡ ನೌಕಾಪಡೆ - 355 ಯುದ್ಧ ಹಡಗು, ಜಲಾಂತರ್ಗಾಮಿಗಳ ಬಲ
- 2024ರ ವೇಳೆಗೆ ನೌಕಾಪಡೆಗೆ ಸ್ವದೇಶಿ ನಿರ್ವಿುತ ಎರಡನೇ ಯುದ್ಧ ವಿಮಾನ ವಾಹಕ ನೌಕೆ
- ಜಲಾಂತರ್ಗಾಮಿಯಿಂದಲೇ ಭೂಮಿ ಮೇಲಿನ ನಿರ್ದಿಷ್ಟ ಗುರಿಗೆ ಕ್ಷಿಪಣಿ ದಾಳಿ ನಡೆಸುವ ಸಾಮರ್ಥ್ಯ, ಜಲಾಂತರ್ಗಾಮಿ ದಾಳಿ ನಿರೋಧಕ ವ್ಯವಸ್ಥೆ
- ಪಶ್ಚಿಮದ ವಾಯುನೆಲೆಗಳ ಬಲವೃದ್ಧಿ
- ವಿಸ್ತೃತ ಶ್ರೇಣಿಯ ಸ್ವದೇಶಿ ನಿರ್ವಿುತ ಯುಎವಿಗಳ ಅಭಿವೃದ್ಧಿ
- ಎಚ್6-ಎನ್ ಮೊದಲ ಅಣ್ವಸ್ತ್ರ ಸಾಮರ್ಥ್ಯ ಹೊಂದಿದ ಮರುಬಳಕೆಯ ಬಾಂಬರ್