ಕಾಸರಗೋಡು: ಪ್ಲಸ್ ವನ್ ವಿದ್ಯಾರ್ಥಿಯ ಕೂದಲನ್ನು ಕತ್ತರಿಸಿ ರ್ಯಾಗಿಂಗ್ ಗೆ ಒಳಪಡಿಸಿದ ಆರೋಪಿಗಳ ವಿರುದ್ಧ ಮಂಜೇಶ್ವರ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರ್ಯಾಗಿಂಗ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರಿಂದ ವಿದ್ಯಾರ್ಥಿ ಪೋಲೀಸರಿಗೆ ದೂರು ನೀಡಲಾಗಿದೆ. ಉಪ್ಪಳ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿಭಾಗದ ಎಂಟು ವಿದ್ಯಾರ್ಥಿಗಳ ವಿರುದ್ಧ ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಜೊತೆಗೆ ಮಕ್ಕಳ ಹಕ್ಕು ಆಯೋಗವು ಈ ಘಟನೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು.
ಪ್ಲಸ್ ಟು ವಿದ್ಯಾರ್ಥಿಗಳು ತನ್ನ ಕೂದಲನ್ನು ರ್ಯಾಗಿಂಗ್ ಮೂಲಕ ಕತ್ತರಿಸಿ ಫ್ಯಾಷನ್ ಪರೇಡ್ ನಡೆಸಿದ್ದಾರೆ ಎಂದು ದೂರಲ್ಲಿ ಉಲ್ಲೇಖಿಸಲಾಗಿದೆ. ರ್ಯಾಗಿಂಗ್‍ಗೆ ಒಳಗಾದ ಮಕ್ಕಳ ಪೈಕಿ ಮಂಜೇಶ್ವರ ಸತ್ಯಡ್ಕದ ಪ್ಲಸ್ ಒನ್ ವಿದ್ಯಾರ್ಥಿಯೊಬ್ಬರು ದೂರು ನೀಡಿದ್ದಾರೆ. ಕಳೆದ ಗುರುವಾರ ಈ ದಾರುಣ ಘಟನೆ ನಡೆದಿದೆ. ಶಾಲೆಯ ಸಮೀಪದ ಅಂಗಡಿಯೊಂದರಲ್ಲಿ ರ್ಯಾಗಿಂಗ್ ನಡೆದಿದೆ.
ಸತ್ಯಡ್ಕದ ವಿದ್ಯಾರ್ಥಿಯೊಬ್ಬನ ಕೂದಲನ್ನು ಕತ್ತರಿಯಿಂದ ಕತ್ತರಿಸಿರುವ ವಿಡಿಯೋ ಗುರುವಾರ ಸಂಜೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಇದರ ಬೆನ್ನಲ್ಲೇ ಇತರ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡುತ್ತಿರುವ ವಿಡಿಯೋಗಳು ಹರಿದಾಡತೊಡಗಿದವು. ಆದರೆ ರ್ಯಾಗಿಂಗ್ ಗೊಳಗಾದ ಯಾವೊಬ್ಬ ವಿದ್ಯಾರ್ಥಿಯೂ ಮೊದಲು ದೂರು ನೀಡಿರಲಿಲ್ಲ. ಆದರೆ, ಮಕ್ಕಳ ಹಕ್ಕು ಆಯೋಗದ ಅಧ್ಯಕ್ಷ ಕೆ.ವಿ.ಮನೋಜ್ ಕುಮಾರ್ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿದ ಬಳಿಕ ವಿದ್ಯಾರ್ಥಿ ದೂರು ನೀಡಿದ್ದಾನೆ.