ನವದೆಹಲಿ: ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಸತತ ಸೋಲು ಕಂಡ ಹಿನ್ನೆಲೆಯಲ್ಲಿ ಕೆಲ ಮಂದಿ ವಿರಾಟ್ ಕೊಹ್ಲಿ ಅವರ 9 ತಿಂಗಳ ಮಗುವಿಗೆ ಆನ್‌ಲೈನ್‌ನಲ್ಲಿ ಅತ್ಯಾಚಾರ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಇದನ್ನು ದೆಹಲಿ ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿದೆ.
ವಿಶ್ವಕಪ್ ಸರಣಿಯಲ್ಲಿ ಭಾರತವು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ಕೆಲ ಮಂದಿ ವಿರಾಟ್ ಕೊಹ್ಲಿ ಅವರ 9 ತಿಂಗಳ ಮಗುವಿಗೆ ಅತ್ಯಾಚಾರ ಬೆದರಿಕೆ ಹಾಕುತ್ತಿದ್ದಾರೆ ಎಂದು ಸೋಮವಾರ ವರದಿಯಾಗಿತ್ತು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿಯ ಮಹಿಳಾ ಆಯೋಗ, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ ಎಫ್‌ಐಆರ್, ಕೈಗೊಂಡ ಕ್ರಮ, ಆರೋಪಿಗಳ ವಿವರವನ್ನು ನ.8ರ ಒಳಗೆ ನೀಡುವಂತೆ ಮಹಿಳಾ ಆಯೋಗವು ದೆಹಲಿಯ ಸಹಾಯಕ ಕಮಿಷನರ್ ಅವರಿಗೆ ಸೂಚಿಸಿದೆ.