ಗುವಾಹಟಿ: ಮಣಿಪುರದಲ್ಲಿ ಉಗ್ರರು ಪೈಶಾಚಿಕ ಕೃತ್ಯ ನಡೆಸಿದ್ದು ಉಗ್ರರ ದಾಳಿಯಲ್ಲಿ ಸೇನಾ ಕರ್ನಲ್ ಅವರ ಪತ್ನಿ ಮತ್ತು ಪುತ್ರ ಸೇರಿ 7 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ರಾಜ್ಯದ ಚುರಾಚಂದ್‌ಪುರ ಜಿಲ್ಲೆಯ ಬೆಹಿಯಾಂಗ್‌ನಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ದಾಳಿ ನಡೆಸಲಾಗಿದೆ. ಹತ್ಯೆಗೀಡಾದ ಕರ್ನಲ್ ಜಿಲ್ಲೆಯ ಅಸ್ಸಾಂ ರೈಫಲ್ಸ್ ಘಟಕದ ಕಮಾಂಡಿಂಗ್ ಅಧಿಕಾರಿಯಾಗಿ ಡೆಪ್ಯುಟೇಶನ್ ಮೇಲೆ ಸೇವೆ ಸಲ್ಲಿಸುತ್ತಿದ್ದರು.
ದಾಳಿಯಲ್ಲಿ ಕರ್ನಲ್ ಮತ್ತು ಅವರ ಕುಟುಂಬ ಸದಸ್ಯರನ್ನು ಹೊರತುಪಡಿಸಿ, ನಾಲ್ವರು ಅಸ್ಸಾಂ ರೈಫಲ್ಸ್ ಸಿಬ್ಬಂದಿ ಮೃತಪಟ್ಟಿದ್ದು, ಮೂರರಿಂದ ನಾಲ್ಕು ಇತರ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ ಎಂದು ಗುಪ್ತಚರ ಸಂಸ್ಥೆಯ ಮೂಲಗಳು ತಿಳಿಸಿವೆ.
ಸೇನಾ ಅಧಿಕಾರಿ ರಜೆಯ ಮೇಲೆ ಹೋಗುತ್ತಿದ್ದರು ಅಥವಾ ರಜೆಯ ನಂತರ ಘಟಕಕ್ಕೆ ಹಿಂತಿರುಗುತ್ತಿದ್ದರು ಈ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಇದುವರೆಗೂ ಯಾವುದೇ ಉಗ್ರಗಾಮಿ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಉಗ್ರರ ಪತ್ತೆಗಾಗಿ ಪೊಲೀಸರು ಮತ್ತು ಭದ್ರತಾ ಪಡೆಗಳು ಭಾರೀ ಕಾರ್ಯಾಚರಣೆ ಆರಂಭಿಸಿವೆ. ಮಣಿಪುರದಲ್ಲಿ 40ಕ್ಕೂ ಹೆಚ್ಚು ದಂಗೆಕೋರ ಗುಂಪುಗಳಿವೆ.