ಕೋಝಿಕೊಡ್: ಕೆಲ ಸಂದರ್ಭಗಳಲ್ಲಿ ವಾಸ್ತವ ಅಂಶಗಳು ಕಲ್ಪನೆಗಿಂತಲೂ ಬಲವಾಗಿರುತ್ತದೆ. ಇದು ಕೇರಳದ ಕೋಝಿಕೊಡ್ ಜಿಲ್ಲೆಯ ನಂದಪುರಂನ ಅಹಮದ್ ಕುನ್ಹಮ್ಮದ್ ಕುಟ್ಟಿ ಮತ್ತು ಅವರ ಪತ್ನಿ ಜೈನಾ ಅಹಮದ್ ಅವರ ರಿಯಲ್ ಸ್ಟೋರಿ ಆಗಿದೆ.
ಜೈನಾ ಅಹಮದ್ ಆರು ಪುತ್ರಿಯರಿಗೆ ಜನ್ಮ ನೀಡಿದಾಗ, ಅಹಮದ್ ಹಾಗೂ ಅವರ ಪತ್ನಿ ಹತಾಶರಾಗಲಿಲ್ಲ. ಬದಲಿಗೆ ಅವರಿಗೆ ಸಂತೋಷವಾಯಿತು. ಅಹಮದ್ ಪ್ರಗತಿಪರ ಚಿಂತಕರಾಗಿದ್ದು, ತನ್ನ ಪುತ್ರಿಯರು ಸಮಾಜದಲ್ಲಿ ಉತ್ತಮ ರೀತಿಯ ಸೇವೆ ಮಾಡಿ, ಇತರರಿಗೆ ರೋಲ್ ಮಾಡೆಲ್ ಆಗಲು ತಮ್ಮ ಜೀವನವನ್ನೆ ಸವೆಸಿದ್ದಾರೆ. ಅವರ ಕನಸು ನನಸಾಗಲು ಬಹಳ ದಿನ ಬೇಕಾಗಲಿಲ್ಲ. ಎಲ್ಲಾ ಅವರ ಆರು ಪುತ್ರಿಯರು ಕೆಲವೇ ದಿನಗಳಲ್ಲಿ ಉತ್ತಮ ಅಧ್ಯಯನ ಮಾಡಿ, ಡಾಕ್ಟರ್ ಆಗಿದ್ದಾರೆ.
ಅಹಮದ್ ಅವರ ನಾಲ್ವರು ಪುತ್ರಿಯರಾದ ಫಾತಿಮಾ ಅಹಮದ್ 39, ಹಜ್ರಾ ಅಹಮದ್ 33, ಅಯೇಷಾ ಅಹಮದ್ 30 ಮತ್ತು ಫೈಜಾ ಅಹಮದ್ ಅವರು ಈಗಾಗಲೇ ಡಾಕ್ಟರ್ ಪ್ರಾಕ್ಟಿಸ್ ಮಾಡುತ್ತಿದ್ದರೆ, 23 ವರ್ಷದ ರಿಯಾನ ಅಹಮದ್ ಚೆನ್ನೈನಲ್ಲಿ ಅಂತಿಮ ವರ್ಷದ ಎಂಬಿಬಿಸಿಸ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಿರಿಯ ಪುತ್ರಿ ಅಮೀರಾ ಅಹಮದ್ ಮಂಗಳೂರಿನಲ್ಲಿ ಮೊದಲ ವರ್ಷದ ಎಂಬಿಬಿಎಸ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಕುತೂಹಲಕಾರಿ ವಿಚಾರವೆಂದರೆ ಫಾತಿಮಾ, ಹಜ್ರಾ, ಅಯೇಷಾ ಮತ್ತು ಫೈಜಾ ಅವರ ಸಂಗಾತಿಗಳಾದ ಡಾ. ರಿಶಾದ್ ರಷೀದ್, ಡಾ.ಅಜ್ನಾಸ್ ಮೊಹಮ್ಮದ್ ಅಲಿ, ಡಾ. ಅಬ್ದುರಹ್ಮಾನ್ ಪಡಿಯಾತ್ ಮನಪಾಟ್ ಮತ್ತು ಡಾ ಅಜಾತ್ ಹರೂನ್ ಕೂಡಾ ವೈದ್ಯರಾಗಿದ್ದಾರೆ.
ಜೈನಾ ಅವರಿಗೆ 12 ವರ್ಷವಿದ್ದಾಗಲೇ ಅವರ ಸಂಬಂಧಿ ಅಹಮದ್ ಜೊತೆಗೆ ವಿವಾಹವಾಗಿದೆ. ಆ ಸಂದರ್ಭದಲ್ಲಿ ಅವರು ಚೆನ್ನೈನಲ್ಲಿ ಬ್ಯುಸಿನೆಸ್ ಒಂದನ್ನು ನಡೆಸುತ್ತಿದ್ದರು. ಮೊದಲ ಪುತ್ರಿ ಜನನದ ಬಳಿಕ ಅಹಮದ್ ತನ್ನ ಪತ್ನಿ ಹಾಗೂ ಪುತ್ರಿಯರೊಂದಿಗೆ ಕತಾರ್ ಗೆ ಹೋಗಿ, ಸಂಸ್ಕರಣಾಗಾರವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.
ಹಜ್ರಾ ಬಿಡಿಎಸ್ ಕೋರ್ಸ್ ಮಾಡಿದ್ದರೆ ಉಳಿದವರೆಲ್ಲಾ ಎಂಬಿಬಿಎಸ್ ಆಯ್ಕೆ ಮಾಡಿಕೊಂಡಿದ್ದಾರೆ. ಕತಾರ್ ನಲ್ಲಿದ್ದ ತಮ್ಮ ಪೋಷಕರು ಅಧ್ಯಯನ ಹಾಗೂ ಸಮಾಜ ಸೇವೆಗೆ ನೀಡಿದ್ದ ಪ್ರೋತ್ಸಾಹದ ಬಗ್ಗೆ ಮಾತನಾಡಿದ ಹಜ್ರಾ, ಶಾಲೆಯಿಂದ ಹಿಂತಿರುಗಿದ ನಂತರ, ಅವರ ಅಧ್ಯಯನ ಹಾಗೂ ಭವಿಷ್ಯ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ತಂದೆತಾಯಿ ಹೇಳುತ್ತಿದ್ದರು. ಫಾತಿಮಾ ಎಂಬಿಬಿಎಂಸ್ ಮುಗಿಸಿದ ನಂತರ ಇತರರು ಕೂಡಾ ಪ್ರೇರಣೆಗೊಂಡು ವೈದ್ಯ ವೃತ್ತಿಯನ್ನು ಆಯ್ಕೆ ಮಾಡಿದೇವು. ಇದೆಲ್ಲಾ ತಮ್ಮ ಪೋಷಕರ ಸಲಹೆ ಮೇರೆಗೆ ನಡೆಯಿತು ಎಂದು ತಿಳಿಸಿದರು.
ಆಯೇಷಾಗೆ ಕಾನೂನಿನಲ್ಲಿ ಆಸಕ್ತಿಯಿತ್ತು. ಆದರೆ, ಎಂಬಿಬಿಸ್ ಕೋರ್ಸ್ ಮುಗಿದ ನಂತರ ಕಾನೂನು ವಿಷಯ ಅಧ್ಯಯನ ಮಾಡುವಂತೆ ಅವರ ಪೋಷಕರು ಆಕೆಗೆ ಹೇಳಿದರು. ಇದೇ ರೀತಿಯಲ್ಲಿ ಅಹಮದ್ ಅವರು ತಮ್ಮ ಪುತ್ರಿಯರ ವಿವಾಹಕ್ಕೆ ಮುಂದಾದಾಗ ಅವರ ವೃತ್ತಿಯಲ್ಲಿ ಇರುವವರನ್ನೇ ಹುಡುಕಿ ಮದುವೆ ಮಾಡಿದ್ದಾರೆ. ಕತಾರ್ ನಲ್ಲಿ 35 ವರ್ಷ ಕೆಲಸ ಮಾಡಿದ ನಂತರ ತಮ್ಮ ಪುತ್ರಿಯರೊಂದಿಗೆ ಕೇರಳಕ್ಕೆ ಮರಳಿದ್ದಾರೆ. ಎರಡು ವರ್ಷದ ನಂತರ ಅಹಮದ್ ಎದೆನೋವಿನಿಂದ ಸಾವನ್ನಪ್ಪಿದ್ದಾರೆ. ಆ ಸಂದರ್ಭದಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ವಿವಾಹವಾಗಿತ್ತು. ತದನಂತರ ಜೈನಾ ತನ್ನ ಉಳಿದ ಇಬ್ಬರು ಪುತ್ರಿಯರಿಗೆ ಎಂಬಿಬಿಎಸ್ ಮಾಡುವಂತೆ ಪ್ರೋತ್ಸಾಹಿಸಿ, ಅವರಿಗೂ ಮದುವೆ ಮಾಡಿದ್ದಾರೆ.
ಪಾತಿಮಾ ಪ್ರಸ್ತುತ ಅಬು ದಾಬಿಯಲ್ಲಿ ಮಿಲಿಟರಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಂದು ವಾಪಸ್ಸಾಗಿ ಪಿಜಿ ಕೋರ್ಸ್ ಮಾಡುವ ಚಿಂತನೆಯಲ್ಲಿರುವುದಾಗಿ ಹಜ್ರಾ ತಿಳಿಸಿದ್ದಾರೆ. ಅಯೇಷಾ ಕೊಡುಂಗಲ್ಲೂರಿನ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಫೈಜಾ ಮತ್ತು ಅವರ ಗಂಡ ಕೊಚ್ಚಿಯಲ್ಲಿ ಕೆಲಸ ಮಾಡುತ್ತಿದ್ದಾರೆ.