ಜಿನಿವಾ: ಸಾಕಷ್ಟು ದೇಶಗಳಲ್ಲಿ ಮೊದಲ ಡೋಸ್ ಲಸಿಕೆಯೇ ದೊರೆತಿಲ್ಲ.. ಇಂತಹ ಪರಿಸ್ಥಿತಿಯಲ್ಲಿ ಲಸಿಕೆ ಬೂಸ್ಟರ್ ಡೋಸ್ ನೀಡುವಿಕೆ ಸರಿಯಲ್ಲ.. ಅದೊಂದು ಹಗರಣ ಎಂದು ವಿಶ್ವ ಆರೋಗ್ಯ ಸಂಸ್ಥೆ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಅವರು, 'ಬಡ ರಾಷ್ಟ್ರಗಳಲ್ಲಿ ನಾಗರಿಕರು ಒಂದೇ ಒಂದು ಡೋಸ್ ಲಸಿಕೆ ಪಡೆಯಲೂ ಹೆಣಗಾಡುತ್ತಿರುವ ಸಂದರ್ಭದಲ್ಲಿ ಶ್ರೀಮಂತ ರಾಷ್ಟ್ರಗಳಲ್ಲಿ ಬೂಸ್ಟರ್ ಡೋಸ್ ಹೆಸರಿನಲ್ಲಿ ನಡೆಯುತ್ತಿರುವ ಲಸಿಕೆಯ ಅಸಮಾನ ಹಂಚಿಕೆಯು ಸರಿಯಲ್ಲ. ಅದೊಂದು ದೊಡ್ಡ ಹಗರಣ. ಅದು ನಿಲ್ಲಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಲಸಿಕಾ ನೀಡಿಕೆಯಲ್ಲಿ ಉತ್ತಮ ಸ್ಥಿತಿಯಲ್ಲಿರುವ ದೇಶಗಳು ಬೂಸ್ಟರ್ ಡೋಸ್‌ಗಳನ್ನು ನೀಡುತ್ತಿರುವ ಹೊತ್ತಿನಲ್ಲಿ, ಬಡ ದೇಶಗಳು ಲಸಿಕೆಗಾಗಿ ಇನ್ನೂ ಕಾಯುತ್ತಿವೆ. ಕಡಿಮೆ ಆದಾಯದ ದೇಶಗಳಲ್ಲಿ ನಡೆಯುತ್ತಿರುವ ಪ್ರಾಥಮಿಕ ಹಂತದ ಲಸಿಕಾ ಕಾರ್ಯಕ್ರಮಕ್ಕಿಂತಲೂ ಆರು ಪಟ್ಟು ಮಿಗಿಲಾಗಿ ಹಲವು ದೇಶಗಳಲ್ಲಿ ಬೂಸ್ಟರ್ ಅಭಿಯಾನ ನಡೆಯುತ್ತಿದೆ. ಇದೊಂದು ಹಗರಣ. ಇದು ನಿಲ್ಲಬೇಕು. ಆರೋಗ್ಯವಂತ ವಯಸ್ಕರಿಗೆ ಬೂಸ್ಟರ್‌ಗಳನ್ನು ನೀಡುವುದು ಸರಿಯಲ್ಲ. ಆರೋಗ್ಯವಂತ ವಯಸ್ಕರಿಗೆ ಬೂಸ್ಟರ್‌ಗಳನ್ನು ನೀಡುವುದರಲ್ಲಿ ಅಥವಾ ಮಕ್ಕಳಿಗೆ ಲಸಿಕೆ ಹಾಕುವುದರಲ್ಲಿ ಅರ್ಥವಿಲ್ಲ. ಆರೋಗ್ಯ ಕಾರ್ಯಕರ್ತರು, ವೃದ್ಧರು ಮತ್ತು ಪ್ರಪಂಚದಾದ್ಯಂತ ಸಂಕಷ್ಟದಲ್ಲಿರುವ ಹಲವು ಗುಂಪುಗಳಿವೆ. ಅವರು ಲಸಿಕೆಗಾಗಿ ಇನ್ನೂ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಲಸಿಕೆಯ ಅಸಮಾನ ವಿತರಣೆಯು ಆಫ್ರಿಕಾ ಖಂಡವನ್ನು ತೀವ್ರವಾಗಿ ಕಾಡಿದೆ. ಅಲ್ಲಿ ಇಡೀ ಖಂಡದ ಜನಸಂಖ್ಯೆಯ ಕೇವಲ ಶೇ.6ರಷ್ಟು ಜನ ಮಾತ್ರ ಕೋವಿಡ್ ಲಸಿಕೆ ಪಡೆದಿದ್ದಾರೆ. ಈ ಹಿಂದೆ ವರ್ಷದ ಅಂತ್ಯದ ವೇಳೆಗೆ ಪ್ರತಿ ದೇಶದ ಜನಸಂಖ್ಯೆಯ ಶೇಕಡಾ 40 ರಷ್ಟು ಮಂದಿಗೆ ವಿಶ್ವ ಆರೋಗ್ಯ ಸಂಸ್ಥೆ ಲಸಿಕೆ ಹಾಕುವ ಗುರಿಯನ್ನು ಹೊಂದಿತ್ತು. ಆದರೆ 100 ಕ್ಕೂ ಹೆಚ್ಚು ದೇಶಗಳು ಪ್ರಸ್ತುತ ಗುರಿಯ ಕೊರತೆಯನ್ನು ಹೊಂದಿವೆ. ದೇಶಗಳ ಜನಸಂಖ್ಯೆಯ ಕನಿಷ್ಠ 20 ಪ್ರತಿಶತದಷ್ಟು ಜನರಿಗೆ ಕೋವಿಡ್ ಲಸಿಕೆ ಡೋಸ್ ಗಳನ್ನು ಒದಗಿಸಲು WHO ನ ಉಪಕ್ರಮವಾದ COVAX ಮೂಲಕ ಕ್ರಮ ಕೈಗೊಳ್ಳಲಾಗಿತ್ತು.
ಆದರೆ ವಿತರಿಸಲು ಸರಿಸುಮಾರು 500 ಮಿಲಿಯನ್ ಡೋಸ್‌ಗಳನ್ನು ಸ್ವೀಕರಿಸದ ಹೊರತು ಆ ಗುರಿ ಸಾಧನೆ ಸಾಧ್ಯವಿಲ್ಲ. ವರದಿಗಳ ಪ್ರಕಾರ ಆಫ್ರಿಕಾದ ಕೇವಲ ಐದು ದೇಶಗಳು ಮೊರಾಕೊ, ಟುನೀಶಿಯಾ ಮತ್ತು ಮಾರಿಷಸ್ ಸೇರಿದಂತೆ ತಮ್ಮ ಜನಸಂಖ್ಯೆಯ ಶೇಕಡಾ 35 ಕ್ಕಿಂತ ಹೆಚ್ಚು ಲಸಿಕೆ ಹಾಕಿವೆ. ಆದರೆ ಹೆಚ್ಚಿನ ಆಫ್ರಿಕನ್ ರಾಷ್ಟ್ರಗಳು ತಮ್ಮ ಜನಸಂಖ್ಯೆಯ ಶೇಕಡಾ 10 ಕ್ಕಿಂತ ಕಡಿಮೆ ಲಸಿಕೆಯನ್ನು ಪಡೆದಿವೆ ಎಂದು WHO ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಹೇಳಿದ್ದರು.