ಮುಳ್ಳೇರಿಯ: ಕರ್ನಾಟಕದಲ್ಲಿ ಇಂಧನ ತೆರಿಗೆ ಇಳಿಕೆಯಾಗಿರುವುದರಿಂದ ಪಂಪ್ ಮಾಲೀಕರು ಗರಿಷ್ಠ ಲಾಭ ಪಡೆಯುತ್ತಿದ್ದಾರೆ. ಇಂಧನ ಬೆಲೆ ಇಳಿಕೆ ಕುರಿತು ಪ್ರಚಾರ ಮಾಡಲು ಮಲಯಾಳಂ ಭಾಷೆಯಲ್ಲಿ ಕೇರಳದ ಗಡಿಗಳಲ್ಲಿ ನೋಟೀಸ್ ಅಂಟಿಸಿ ಪಂಪ್ ಮಾಲೀಕರು ಕೇರಳದ ವಾಹನ ಸವಾರರನ್ನು ಸೆಳೆಯುತ್ತಿದ್ದಾರೆ. ಮಲಯಾಳಂನಲ್ಲಿ ಮುದ್ರಿತವಾಗಿರುವ ನೋಟೀಸ್ ನಲ್ಲಿ ಡೀಸೆಲ್ 7 ರೂ., ಪೆಟ್ರೋಲ್ 5 ರೂ. ಕಡಿಮೆಗೆ ಇಲ್ಲಿ ಲಭಿಸುತ್ತದೆ. ಇಲ್ಲಿಯ ಪಂಪ್ ನಿಂದ ಇಂಧನವನ್ನು ಭರ್ತಿ ಮಾಡಿ ಮತ್ತು ಕೊಡುಗೆಯ ಲಾಭವನ್ನು ಪಡೆದುಕೊಳ್ಳಿ ಎಂದು ಪೋಸ್ಟರ್‍ಗಳು ಗಮನ ಸೆಳೆಯುತ್ತಿವೆ.
ಇಂಧನ ಬೆಲೆಯ ಮೇಲಿನ ತೆರಿಗೆಯನ್ನು ಕೇಂದ್ರ ಕಡಿಮೆ ಮಾಡಿದ ನಂತರ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ವ್ಯಾಟ್ ನ್ನು ಕಡಿಮೆ ಮಾಡಿದ್ದವು. ಆದರೆ ಕೇರಳದಲ್ಲಿ ತೆರಿಗೆ ಇಳಿಕೆ ಮಾಡುವುದಿಲ್ಲ ಎಂದು ರಾಜ್ಯ ಸರ್ಕಾರ ಪಟ್ಟು ಹಿಡಿದಿರುವುದು ಕೇರಳದಲ್ಲಿ ಇಂಧನ ಬೆಲೆ ಏರಿಕೆಗೆ ಕಾರಣವಾಗಿದೆ. ಇದರೊಂದಿಗೆ ಕೇರಳದ ಗಡಿ ಜಿಲ್ಲೆಗಳಿಂದ ಕರ್ನಾಟಕದ ಪಂಪ್ ಗಳಿಗೆ ಹರಿವು ಹೆಚ್ಚಿದೆ. ಪಂಪ್ ಮಾಲೀಕರೂ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಸಿದ್ಧಪಡಿಸಿರುವ ಮಲಯಾಳಂ ಸೂಚನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೇರಳದಿಂದ ಬರುವ ಸರಕು ವಾಹನಗಳು ಕರ್ನಾಟಕದಿಂದ ಫುಲ್ ಟ್ಯಾಂಕ್ ಇಂಧನ ತುಂಬಿಸಿಕೊಳ್ಳುತ್ತಿವೆ. ಕಾಸರಗೋಡಿನ ಗಡಿ ಭಾಗವಾದ ಚೆರ್ಕಳ-ಜಾಲ್ಸೂರು ರಾಜ್ಯ ಹೆದ್ದಾರಿಯ ಗಾಳಿಮುಖದಲ್ಲಿ ಇಂತಹ ಪೋಸ್ಟರ್ ಕಂಡುಬಂದಿದೆ. ಈಗಾಗಲೇ ವತಯನಾಡಿನ ಗಡಿಗಳಲ್ಲೂ ಈ ರೀತಿಯ ಪೋಸ್ಟರ್ ಕಂಡುಬಂದಿತ್ತು.