ನವದೆಹಲಿ: ಯುಎಇ ರಾಜಕುಮಾರಿ ಹಿಂದ್ ಬಿಂತ್ ಫೈಸಲ್ ಅಲ್ ಖಾಸಿಮ್ ಇಸ್ಲಾಮ್ ವಿರುದ್ಧದ ಇಸ್ಲಾಮೋಫೋಬಿಕ್ ಕಂಟೆಂಟ್, ದ್ವೇಷಪೂರಿತ ವಿಚಾರಗಳನ್ನು ವಿರೋಧಿಸುವ ಬಗೆಗಿನ ತನ್ನ ದಿಟ್ಟ ನಿಲುವುಗಳಿಗೆ ಹೆಸರುವಾಸಿಯಾಗಿದ್ದು, ಇದೀಗ ಝೀ ನ್ಯೂಸ್‌ನ ನಿರೂಪಕ ಮತ್ತು ಮುಖ್ಯ ಸಂಪಾದಕ ಸುಧೀರ್ ಚೌಧರಿ ಅವರನ್ನು ಯುಎಇಗೆ ಆಹ್ವಾನಿಸಿದ್ದಕ್ಕಾಗಿ ಸಂಘಟಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಿಂದ್ ಬಿಂತ್ ಫೈಸಲ್ ಅಲ್ ಖಾಸಿಮ್ ಶಾರ್ಜಾದ ರಾಜಮನೆತನ ಖಾಸಿಮಿ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ತನ್ನ ಟಿವಿ ಕಾರ್ಯಕ್ರಮಗಳ ಮೂಲಕ ಇಸ್ಲಾಮೋಫೋಬಿಯಾವನ್ನು ಸುಧೀರ್ ಚೌಧರಿ ಪ್ರಸಾರ ಮಾಡುತ್ತಿದ್ದರೂ ಅವರನ್ನು ಯುಎಇಗೆ ಆಹ್ವಾನಿಸಿದ್ದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಧೀರ್ ಮುಸ್ಲಿಮರನ್ನು ಮತ್ತು ಇಸ್ಲಾಂ ಅನ್ನು ದ್ವೇಷಿಸುತ್ತಿರುವ ಕುರಿತು ಸಂಘಟಕರಿಗೆ ನೆನಪಿಸುವ ವೇಳೆ ಅವರು ಚೌಧರಿಯನ್ನು ʼಭಯೋತ್ಪಾದಕʼ ಎಂದು ಸಂಬೋಧಿಸಿದರು. "ನನ್ನ ಶಾಂತಿಯುತ ದೇಶಕ್ಕೆ ಇಸ್ಲಾಮೋಫೋಬ್ ಅನ್ನು ಆಹ್ವಾನಿಸಲು ನಿಮಗೆ ಎಷ್ಟು ಧೈರ್ಯ?" ಅವರು ಶನಿವಾರ ತಮ್ಮ ಟ್ವೀಟ್‌ವೊಂದರಲ್ಲಿ ಬರೆದಿದ್ದಾರೆ.
"೨೦೧೯ ಮತ್ತು ೨೦೨೦ರಲ್ಲಿ ಸುಧೀರ್ ಚೌಧರಿ ಝೀ ನ್ಯೂಸ್ ನಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಿದ್ದು, ಅದರಲ್ಲಿ ಪೌರತ್ವ ವಿರೋಧಿ ಪ್ರತಿಭಟನೆಗಳನ್ನು ಮುನ್ನಡೆಸಿದ್ದಕ್ಕಾಗಿ ಮುಸ್ಲಿಮರ ವಿರುದ್ಧ ದ್ವೇಷ ಕಾರಿದ್ದಾರೆ. ಶಾಹೀನ್ ಬಾಗ್, ಹೊಸದಿಲ್ಲಿ ಮತ್ತು ದೇಶದ ಇತರ ಭಾಗಗಳಲ್ಲಿ ಪೌರತ್ವ ಪ್ರತಿಭಟನೆಯ ನೇತೃತ್ವ ವಹಿಸಿದ್ದಕ್ಕಾಗಿ ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಮಹಿಳೆಯರನ್ನು ಗುರಿಯಾಗಿಸಿಕೊಂಡು ನಕಲಿ ಕಥೆಗಳನ್ನು ಹೆಣೆದಿದ್ದಾರೆ" ಎಂದು ಅವರು ಉಲ್ಲೇಖಿಸಿದ್ದಾರೆ.
'ಸುಧೀರ್ ಚೌಧರಿ ಹಿಂದೂ ಬಲಪಂಥೀಯ ನಿರೂಪಕನಾಗಿದ್ದು, ಭಾರತದ 200 ಮಿಲಿಯನ್ ಮುಸ್ಲಿಮರನ್ನು ಗುರಿಯಾಗಿಸುವ ಇಸ್ಲಾಮೋಫೋಬಿಕ್ ಕಾರ್ಯಕ್ರಮಗಳಿಗೆ ಕುಖ್ಯಾತಿ ಪಡೆದಿದ್ದಾರೆ. ಅವರ ಅನೇಕ ಪ್ರೈಮ್ ಟೈಮ್ ಶೋಗಳು ದೇಶಾದ್ಯಂತ ಮುಸ್ಲಿಮರ ವಿರುದ್ಧದ ಹಿಂಸಾಚಾರಕ್ಕೆ ನೇರವಾಗಿ ಕೊಡುಗೆ ನೀಡಿವೆ" ಎಂದಿದ್ದಾರೆ. ಅವರು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾವನ್ನು ಟ್ಯಾಗ್ ಮಾಡಿ, "ನೀವು ಅಸಹಿಷ್ಣು ಭಯೋತ್ಪಾದಕನನ್ನು ಯುಎಇಗೆ ಏಕೆ ಕರೆತರುತ್ತಿದ್ದೀರಿ?" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.