ನವದೆಹಲಿ: ಬಸ್ ನಿಲ್ದಾಣ ಹಾಗೂ ರೇಲ್ವೇ ನಿಲ್ದಾಣದಲ್ಲಿಯೂ ಕೋವಿಡ್ ಲಸಿಕೆ ಕೇಂದ್ರವನ್ನು ಸ್ಥಾಪನೆ ಮಾಡುವಂತೆ ಕೇಂದ್ರ ಸರ್ಕಾರವು, ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ಕೊರೊನಾ ವೈರಸ್ ಸೋಂಕಿನ ವಿರುದ್ಧ ಜನರು ಲಸಿಕೆಯನ್ನು ಪಡೆಯುವುದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ಬಗ್ಗೆ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಗುರುವಾರ ಸೂಚನೆ ನೀಡಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ, ರಾಜ್ಯದ ಆರೋಗ್ಯ ಸಚಿವರೊಂದಿಗೆ ಸಭೆಯನ್ನು ನಡೆಸಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ವಿರುದ್ಧ ಲಸಿಕೆ ನೀಡಿಕೆ ಪ್ರಕ್ರಿಯೆಯನ್ನು ಇನ್ನಷ್ಟು ಅಧಿಕ ಮಾಡುವ ನಿಟ್ಟಿನಲ್ಲಿ ಈ ಸಭೆಯನ್ನು ನಡೆಸಲಾಗಿದೆ.
ಪ್ರಸ್ತುತ ದೇಶದಲ್ಲಿ ಶೇಕಡ 79 ರಷ್ಟು ವಯಸ್ಕರು ಮೊದಲ ಡೋಸ್ ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ ಹಾಗೂ ಶೇಕಡ 38 ರಷ್ಟು ಮಂದಿ ಎರಡೂ ಡೋಸ್ ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಸುಮಾರು 12 ಕೋಟಿಗೂ ಅಧಿಕ ಮಂದಿ ತಮ್ಮ ಎರಡನೇ ಡೋಸ್ ಲಸಿಕೆ ಪಡೆಯುವ ಅವಧಿ ಮುಗಿದಿದ್ದರೂ ಕೂಡಾ ಲಸಿಕೆಯನ್ನು ಇನ್ನೂ ಕೂಡಾ ಪಡೆದುಕೊಂಡಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಜನರಲ್ಲಿ ಕೋವಿಡ್ ಲಸಿಕೆಯನ್ನು ಪಡೆಯುವಂತೆ ಮನವಿ ಮಾಡಿದ್ದಾರೆ.ಎಲ್ಲಾ ವಯಸ್ಕರು ಎರಡನೇ ಡೋಸ್ ಲಸಿಕೆಯನ್ನು ಪಡೆದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳುವಂತೆ ರಾಜ್ಯ ಆರೋಗ್ಯ ಸಚಿವರುಗಳಿಗೆ ಕೇಂದ್ರ ಸಚಿವರು ಸೂಚನೆ ನೀಡಿದರು. ಹರ್ ಘರ್ ದಸ್ತಕ್ ಅಭಿಯಾನದ ಸಂದರ್ಭದಲ್ಲಿ ಕೋವಿಡ್ ವಿರುದ್ಧ ಲಸಿಕೆಯನ್ನು ಹಲವಾರು ಮಂದಿ ಪಡೆದುಕೊಂಡಿದ್ದಾರೆ. ಆದರೆ ಈವರೆಗೂ ಎರಡನೇ ಡೋಸ್ ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡಿಲ್ಲ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ. ಎರಡನೇ ಡೋಸ್ ಲಸಿಕೆಯನ್ನು ಜನರು ಪಡೆಯುವಂತೆ ಪ್ರೋತ್ಸಾಹ ನೀಡಿ ಎಂದು ಹೇಳಿದರು.
''ರೊಕೊ ಔರ್ ಟೊಕೊ'' ಅಭಿಯಾನ ರೊಕೊ ಔರ್ ಟೊಕೊ ಅಭಿಯಾನವನ್ನು (ನಿಲ್ಲಿಸಿ ಲಸಿಕೆ ಹಾಕಿಸಿ) ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣದಲ್ಲಿ ನಡೆಸಲು ಕೇಂದ್ರ ಆರೋಗ್ಯ ಸಚಿವರು ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ. ಈ ಮೂಲಕ ಜನರಲ್ಲಿ ಕೋವಿಡ್ ಲಸಿಕಾ ಜಾಗೃತಿಯನ್ನು ಮೂಡಿಸಲು ಸಾಧ್ಯವಾಗಬಹುದು. ಜನರನ್ನು ನಿಲ್ಲಿಸಿ ಅವರು ಲಸಿಕೆ ಹಾಕಿಸಿಕೊಂಡಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಿ ಎಂದು ಕೂಡಾ ಹೇಳಿದ್ದಾರೆ. ಇನ್ನು ರಾಜ್ಯ ಸರ್ಕಾರಗಳು ತಮ್ಮ ರಾಜ್ಯದಲ್ಲಿ ಪ್ರಚಾರ ತಂಡವನ್ನು ಕೂಡಾ ನಿಯೋಜನೆ ಮಾಡಬೇಕು. ಈ ತಂಡವು ಎಲ್ಲಾ ಹಳ್ಳಿ-ಹಳ್ಳಿಗೂ ಹೋಗಿ ಕೋವಿಡ್ ಲಸಿಕೆಯನ್ನು ಪಡೆಯಲು ಹಾಕುವ ಮಹತ್ವದ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು. ಈ ತಂಡದ ಜೊತೆಯಲ್ಲಿ ಲಸಿಕೆ ತಂಡವೂ ಕೂಡಾ ಇರಬೇಕು. ಈ ಲಸಿಕೆ ತಂಡವು ಜನರು ಕೋವಿಡ್ ಲಸಿಕೆಯ ಎರಡನೇ ಡೋಸ್ ಹಾಕಿಸಿಕೊಂಡಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸಚಿವರು ಹೇಳಿದ್ದಾರೆ.
ಅವಧಿ ಮುಗಿದರೂ 2 ನೇ ಡೋಸ್ ಲಸಿಕೆ ಪಡೆಯದ ಜನರು:
ಕಳೆದ ತಿಂಗಳು ಕೇಂದ್ರ ಸರ್ಕಾರವು ಸುಮಾರು 11 ಕೋಟಿ ಜನರಿಗೆ ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳುವ ಅವಧಿ ಮುಗಿದಿದೆ. ಆದರೂ ಇನ್ನೂ ಲಸಿಕೆಯನ್ನು ಹಾಕಿಸಿಕೊಂಡಿಲ್ಲ ಎಂದು ಹೇಳಿದೆ. ಈಗ ಈ ಸಂಖ್ಯೆಯು 12 ಕೋಟಿಯನ್ನು ದಾಟಿದೆ. ಸುಮಾರು 11 ಕೋಟಿ ಜನರು ಕೊರೊನಾ ಲಸಿಕೆಯ ಮೊದಲ ಡೋಸ್ ಅನ್ನು ಹಾಕಿಸಿಕೊಂಡಿದ್ದಾರೆ. ಈಗ ಎರಡನೇ ಡೋಸ್ ಲಸಿಕೆ ಪಡೆಯುವ ಅವಧಿ ಮುಗಿದಿದೆ. ಆದರೆ ಇನ್ನು ಕೂಡಾ ಲಸಿಕೆಯನ್ನು ಹಾಕಿಸಿಕೊಂಡಿಲ್ಲ ಎಂದು ಕೇಂದ್ರ ಸರ್ಕಾರದ ಡೇಟಾವು ಉಲ್ಲೇಖ ಮಾಡಿದೆ. ಕೊರೊನಾ ಲಸಿಕೆಯ ಎರಡನೇ ಡೋಸ್‌ನ ಅವಧಿ ಮುಗಿದಿದ್ದರೂ ಕೂಡಾ ಇನ್ನು ಕೂಡಾ ಎರಡನೇ ಡೋಸ್ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳದವರು ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ತಾನ, ಮಹಾರಾಷ್ಟ್ರ ಹಾಗೂ ಬಿಹಾರದಲ್ಲಿ ಅಧಿಕವಾಗಿದ್ದಾರೆ. ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳದ ಶೇಕಡ 49 ರಷ್ಟು ಮಂದಿ ಈ ರಾಜ್ಯಗಳಲ್ಲಿ ಇದ್ದಾರೆ ಎಂದು ಕೇಂದ್ರ ಸರ್ಕಾರದ ಡೇಟಾವು ಉಲ್ಲೇಖ ಮಾಡಿತ್ತು.