ಬದಿಯಡ್ಕ: ಪ್ರಧಾನಿ ನರೇಂದ್ರಮೋದಿಯವರ ಮುಂದಾಳುತ್ವದಲ್ಲಿ ಆರೋಗ್ಯ ಇಲಾಖೆಯ ಕಾರ್ಯಕರ್ತರ ಶ್ರಮದ ದುಡಿಮೆಯ ಫಲವಾಗಿ ದೇಶವು ಕೊರೋನಾವನ್ನು ಹೊಡೆದೋಡಿಸುವಲ್ಲಿ ಸಫಲತೆಯನ್ನು ಕಂಡಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಹೇಳಿದರು.
ಕೋವಿಡ್ ನಿರ್ಮೂಲನೆಗಾಗಿ ದೇಶದಲ್ಲಿ 100 ಕೋಟಿ ಲಸಿಕೆಯನ್ನು ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಕುಂಬ್ಡಾಜೆ ಆರೋಗ್ಯ ಕಾರ್ಯಕರ್ತರಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಗಲಿರುಳೆನ್ನದೆ ದೇಶದ ಒಳಿತಿಗಾಗಿ ದುಡಿದ ಆರೋಗ್ಯ ಕಾರ್ಯಕರ್ತರ ಶ್ರಮಕ್ಕೆ ಬೆಲೆಕಟ್ಟಲಾಗದು. ಅವರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.
ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ, ಬಿಜೆಪಿ ರಾಜ್ಯ ಸಮಿತಿ ಸದಸ್ಯ ಹಾಗೂ ಕುಂಬ್ಡಾಜೆ ಗ್ರಾಪಂ ಸ್ಥಾಯಿಸಮಿತಿ ಅಧಕ್ಷ ಎಂ.ಸಂಜೀವ ಶೆಟ್ಟಿ, ಕರ್ಷಕ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಎಂ.ಪ್ರಭಾಕರ ರೈ, ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಜಾ ಭಟ್, ಜನಪ್ರತಿನಿಧಿಗಳಾದ ಕೃಷ್ಣ ಶರ್ಮ, ಸುಂದರ ಮವ್ವಾರು, ಮೀನಾಕ್ಷಿ, ನೇತಾರರಾದ ಹರೀಶ್ ಕುಣಿಕುಳ್ಳಾಯ, ರಮೇಶ್ ಕೃಷ್ಣ ಪದ್ಮಾರು, ಗೋಪಾಲಕೃಷ್ಣ ಮುಂಡೋಳುಮೂಲೆ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ಆರೋಗ್ಯ ಇಲಾಖೆಯ ಪರವಾಗಿ ಪ್ರಧಾನ ವೈದ್ಯಾಕಾರಿ ಡಾ. ಸುಹೈಬ್ ತಂಙಳ್ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಕುಂಬ್ಡಾಜೆ ಪಂಚಾಯಿತಿ ಸಮಿತಿ ಅಧ್ಯಕ್ಷ ರವೀಂದ್ರ ರೈ ಗೋಸಾಡ ಸ್ವಾಗತಿಸಿ, ಕಾರ್ಯದರ್ಶಿ ಶಶಿಧರ ತೆಕ್ಕೆಮೂಲೆ ವಂದಿಸಿದರು.