ಪೆರ್ಲ: ಅಂತತಾರಾಜ್ಯ ಸಂಪರ್ಕ ಕಲ್ಪಿಸುವ ಪೆರ್ಲದಿಂದ ಸ್ವರ್ಗ ಮೂಲಕ ಪಾಣಾಜೆ-ಸೂರಂಬೈಲ್ ಹಾದಿಯಾಗಿ ಪುತ್ತೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕನ್ನಟಿಕಾನದಲ್ಲಿ ಖಾಸಗಿ ಬಸ್ ಒಂದು ರಸ್ತೆಬದಿ ಮಣ್ಣಿನಲ್ಲಿ ಹೂತುಕೊಂಡು, ಬಸ್ಸಿನ ಹಿಂದಿನ ಭಾಗ ಗೋಡೆಗೆ ಬಡಿದು ನಿಲ್ಲುವ ಮೂಲಕ ಭಾರಿ ದುರಂತವೊಂದು ತಪ್ಪಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಗಾಯಗಳಿಲ್ಲದೆ ಪಾರಾಗಿದ್ದಾರೆ.
ಪಾಣಾಜೆ ಭಾಗದಿಂದ ಪೆರ್ಲ ಮೂಲಕ ಕುಂಬಳೆ ತೆರಳುತ್ತಿದ್ದ, ಪ್ರಯಾಣಿಕರಿಂದ ತುಂಬಿದ್ದ ಟೂರಿಸ್ಟ್ ಬಸ್ ಕಡಿದಾದ ತಿರುವು ಹಾಗೂ ಇಕ್ಕಟ್ಟಿನಿಂದ ಕೂಡಿದ ರಸ್ತೆಯಲ್ಲಿ ಸಂಚರಿಸುತ್ತಿರುವ ಮಧ್ಯೆ ನಿಯಂತ್ರಣ ತಪ್ಪಿ ರಸ್ತೆ ಅಂಚಿಗೆ ಜಾರಿ ಖಾಸಗಿ ಹಿತ್ತಿಲ ಧರೆಗೆ ಬಡಿದು ನಿಂತಿತ್ತು. ಎದುರಿನಿಂದ ಆಗಮಿಸಿದ ಕಾರಿಗೆ ಹಾದಿಮಾಡಿಕೊಡುವ ಯತ್ನದಲ್ಲಿದ್ದಾಗ ಬಸ್ಸಿನ ಟಯರ್, ನೀರಿನ ಪೈಪ್ ಅಳವಡಿಕೆಗಾಗಿ ರಸ್ತೆಅಂಚಿಗೆ ಅಗೆದು ಮುಚ್ಚಲಾಗಿದ್ದ ಮಣ್ಣಿನ ಮೇಲ್ಭಾಗದಿಂದ ಸಾಗಿದಾಗ ಹೂತುಕೊಂಡು ಅಪಘಾತವುಂಟಾಗಿದೆ. ಇನ್ನೊಂದು ಪಾಶ್ರ್ವದಲ್ಲಿ ಕಡಿದಾದ ಕಂದಕವಿದ್ದು, ಬಸ್ ಕೂದಲೆಳೆಯ ಅಂತರದಿಂದ ಪಾರಾಗಿ ಧರೆಗೆ ತಾಗಿ ಸ್ಥಗಿತಗೊಂಡಿದೆ. ಮಂಗಳವಾರ ಇದೇ ಜಾಗದಲ್ಲಿ ಲಾರಿಯೊಂದು ಅಪಘಾತಕ್ಕೀಡಾಗಿತ್ತು.
ಪೆರ್ಲದಿಂದ ಸ್ವರ್ಗ ವರೆಗಿನ ಹಾದಿಯಲ್ಲಿ ಕಳೆದ ಒಂದೆರಡು ದಶಕದಲ್ಲಿ ಹತ್ತಕ್ಕೂ ಹೆಚ್ಚು ದೊಡ್ಡ ಅಪಘಾತಗಳು ನಡೆದಿದ್ದು, ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪೆರ್ಲದಿಂದ ಸ್ವರ್ಗ ಮೂಲಕ ವಾಣೀನಗರಕ್ಕೆ ಹಾಗೂ ಸ್ವರ್ಗ, ಪಾಣಾಜೆ ಹಾದಿಯಾಗಿ ಪುತ್ತೂರಿಗೆ ಬಸ್‍ಗಳು ಸೇರಿದಂತೆ ಹತ್ತು ಹಲವು ವಾಹನಗಳೂ ಸಂಚಾರ ನಡೆಸುತ್ತಿದ್ದು, ಚಾಲಕರೆಲ್ಲರೂ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾಗುತ್ತಿದೆ.