ಕಾಸರಗೋಡು: ಜಿಲ್ಲೆಯ ಚೀಮೇನಿಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತ ಮಗುವಿನ ತಾಯಿಯಿಂದ ಭೂಮಿಯ ಹಕ್ಕುಪತ್ರ ನೀಡುವ ಬಗ್ಗೆ ಲಂಚ ಸ್ವೀಕರಿಸಲೆತ್ನಿಸಿದ ಇಬ್ಬರು ಕಂದಾಯ ಇಲಾಖೆ ಅಧಿಕಾರಿಗಳನ್ನು ವಿಜಿಲೆನ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಚೀಮೇನಿ ಗ್ರಾಮಾಧಿಕಾರಿ ಕರಿವೆಳ್ಳೂರು ತರು ನಿವಾಸಿ ಎ.ವಿ ಸಂತೋಷ್ ಹಾಗೂ ಫೀಲ್ಡ್ ಅಸಿಸ್ಟೆಂಟ್ ಕಣ್ಣೂರು ಮಾತಮಂಗಲ ನಿವಾಸಿ ಕೆ.ಸಿ ಮಹೇಶ್ ಬಂಧಿತರು. ಚೀಮೇನಿ ಙಂಡಾಟಿ ನಿವಾಸಿ ಪಿ. ನಿಶಾ ಅವರ ದೂರಿನ ಮೇರೆಗೆ ವಿಜಿಲೆನ್ಸ್ ಡಿವೈಎಸ್‍ಪಿ ಕೆ.ವಿ ವೇಣುಗೋಪಾಲ್ ನೇತೃತ್ವದ ಪೊಲೀಸರ ತಂಸ್ತಿವರನ್ನು ಬಂಧಿಸಿದೆ. ತನ್ನ ತಂದೆಯ ಆಸ್ತಿಯಲ್ಲಿನ 50ಸೆಂಟ್ ಸ್ಥಳದ ಹಕ್ಕುಪತ್ರ ಪಡೆಯಲು ಗ್ರಾಮಾಧಿಕಾರಿ ಕಚೇರಿಗೆ ತೆರಳಿದಾಗ ಒಂದುವರೆ ಲಕ್ಷ ರೂ. ನೀಡುವಂತೆ ಬೇಡಿಕೆಯಿರಿಸಿದ್ದರು. 2019ರಲ್ಲಿ ಭೂತೆರಿಗೆ ಸಲ್ಲಿಸುವ ವ್ಯವಸ್ಥೆ ಕಂಪ್ಯೂಟರೀಕರಣಗೊಂಡ ಹಿನ್ನೆಲೆಯಲ್ಲಿ ತೆರಿಗೆ ಪಾವತಿಸುವಲ್ಲಿ ವಿಳಂಬವಾಗಿದ್ದು, ಇದನ್ನು ವಿಚಾರಿಸುವ ನಿಟ್ಟಿನಲ್ಲಿ ನಿಶಾ ಬಳಿ ತೆರಳಿದ್ದ ಅಧಿಕಾರಿಗಳು ತೆರಿಗೆ ಮೊತ್ತ ಸಹಿತ ಒಂದುವರೆ ಲಕ್ಷ ರೂ. ನೀಡಿದಲ್ಲಿ ಹಕ್ಕುಪತ್ರ ನೀಡುವುದಾಗಿ ತಿಳಿಸಿದ್ದರು. ನಿಶಾ ಅವರ ಮಗು ಎಂಡೋಸಲ್ಫಾನ್ ದುಷ್ಪರಿಣಾಮದಿಂದ ಬಳಲುತ್ತಿದ್ದು, ಆರ್ಥಿಕ ಸಂಕಷ್ಟ ಕಾಡುತ್ತಿರುವ ನಡುವೆಯೂ ಏಳು ಗ್ರಾಂ ಚಿನ್ನ ಬ್ಯಾಂಕಲ್ಲಿ ಅಡವಿರಿಸಿ ಹಣ ಒಟ್ಟುಗೂಡಿಸಿದ್ದರು. ಶುಕ್ರವಾರ ಹಣ ನೀಡುವಂತೆ ಅಧಿಕಾರಿಗಳು ತಿಳಿಸಿದ್ದ ಹಿನ್ನೆಲೆಯಲ್ಲಿ ವಿಜಿಲೆನ್ಸ್ ಅಧಿಕಾರಿಗಳಿಗೆ ನಿಶಾ ಮಾಹಿತಿ ನೀಡಿದ್ದು, ಹಣ ಹಸ್ತಾಂತರಿಸುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ್ದರು.