ನೌಶೆರಾ: ದೇಶದ ಗಡಿ ಕಾಯುವ ವೀರ ಯೋಧರೊಂದಿಗೆ ದೀಪಾವಳಿ ಆಚರಣೆ ಮಾಡುವ ಸಲುವಾಗಿ ಜಮ್ಮು ಮತ್ತು ಕಾಶ್ಮೀರದ ನೌಶೆರಾಗೆ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಈ ವೇಳೆ ಸೇನಾಪಡೆಗಳನ್ನು ಕೊಂಡಾಡಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿಯೂ ಪ್ರಧಾನಿ ಮೋದಿ ಗಡಿಯಲ್ಲಿರುವ ಯೋಧರೊಂದಿಗೆ ದೀಪಾವಳಿ ಆಚರಿಸುತ್ತಿದ್ದು, ಜಮ್ಮು-ಕಾಶ್ಮೀರದ ನೌಶೆರಾದಲ್ಲಿ ಯೋಧರೊಂದಿಗೆ ಬೆಳಕಿನ ಹಬ್ಬ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಜಮ್ಮು-ಕಾಶ್ಮೀರದ ನೌಶೇರಾಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಯೋಧರ ಭೇಟಿಗೂ ಮುನ್ನ ಹುತಾತ್ಮ ಯೋಧರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.
ಬಳಿಕ ಯೋಧರನ್ನುದ್ದೇಶಿಸಿ ಮಾತನಾಡಿರುವ ಅವರು, ನಾನು ಪ್ರತಿ ದೀಪಾವಳಿಯನ್ನು ನಮ್ಮ ಗಡಿ ಕಾಯುವ ಸೈನಿಕರೊಂದಿಗೆ ಕಳೆದಿದ್ದೇನೆ. ಇಂದು ಇಲ್ಲಿ ನಮ್ಮ ಸೈನಿಕರಿಗಾಗಿ ಕೋಟ್ಯಂತರ ಭಾರತೀಯರ ಆಶೀರ್ವಾದವನ್ನು ನನ್ನೊಂದಿಗೆ ತಂದಿದ್ದೇನೆ. ನಮ್ಮ ಸೈನಿಕರು 'ಮಾ ಭಾರತಿ'ಯ 'ಸುರಕ್ಷಾ ಕವಚ'ವಾಗಿದ್ದಾರೆ. ಇಂದು ನನ್ನ ಎದುರು ಕೆಚ್ಚೆದೆಯ ಸೋದರರು- ಸೋದರಿಯರಿದ್ದೀರಿ. ನಿಮ್ಮ ಮಾತೃಭೂಮಿಗಾಗಿ ನೀವೆಲ್ಲರೂ ಧೈರ್ಯದಿಂದ ಹೋರಾಡುತ್ತಿದ್ದೀರಿ. ನಮ್ಮ ತಾಯ್ನಾಡನ್ನು ಕಾಪಾಡಲೇಬೇಕೆಂಬ ಹಠ, ಬದ್ಧತೆ ನಿಮ್ಮ ಕಣ್ಣುಗಳಲ್ಲಿ ಕಾಣುತ್ತಿದೆ. ನಿಮ್ಮಿಂದಾಗಿಯೇ ನಾವಿಂದು ನಿಶ್ಚಿಂತೆಯಿಂದ ನಿದ್ರೆ ಮಾಡುತ್ತಿದ್ದೇವೆ, ದೇಶಾದ್ಯಂತ ಸಂಭ್ರಮದಿಂದ, ಯಾವುದೇ ಭಯವಿಲ್ಲದೆ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದೀಗ ನಮ್ಮ ದೇಶದ ಮಹಿಳೆಯರಿಗೆ ಕೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ. ನಮ್ಮ ದೇಶದ ಹೆಣ್ಣುಮಕ್ಕಳು ತಮ್ಮ ಸಾಮರ್ಥ್ಯವೇನೆಂದು ಜಗತ್ತಿಗೆ ಮತ್ತೊಮ್ಮೆ ಸಾಬೀತುಪಡಿಸುವ ಸಮಯ ಬಂದಿದೆ. ಮಹಿಳೆಯರು ಕೂಡ ಭಾರತಾಂಬೆಯನ್ನು ಶತ್ರುಗಳಿಂದ ಕಾಪಾಡಲು ಕಂಕಣಬದ್ಧರಾಗಿರುವುದನ್ನು ನೋಡಿದರೆ ನನಗೆ ಹೆಮ್ಮೆ ಎನಿಸುತ್ತಿದೆ ಎಂದು ತಿಳಿಸಿದ್ದಾರೆ.
2014ರಿಂದಲೂ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿರುವ ಪ್ರಧಾನಿ ಮೋದಿ, ಕಳೆದ ವರ್ಷದ ದೀಪಾವಳಿ ಸಂದರ್ಭದಲ್ಲಿ ರಾಜಸ್ಥಾನದ ಜೈಸಲ್ಮೇರ್‌ನ ಲೊಂಗೇವಾಲಾ ಗಡಿಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು.
ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಾಣೆ ಅವರು ನಿನ್ನೆ ಈ ಭಾಗದಲ್ಲಿ ವೈಮಾನಿಕ ಪರಿಶೀಲನೆ ನಡೆಸಿದ್ದು, ಜಮ್ಮು ಪ್ರದೇಶದಲ್ಲಿನ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಚಾಲ್ತಿಯಲ್ಲಿರುವ ಭದ್ರತಾ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದರು.