ವಾಷಿಂಗ್ಟನ್: ಜಗತ್ತಿನ ಮೊಟ್ಟ ಮೊದಲ ಗ್ರಹ ರಕ್ಷಣಾ ವ್ಯವಸ್ಥೆ 'ಡಾರ್ಟ್' (Double Asteroid Redirection Test-DART) ಗಗನನೌಕೆಯನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಸ್ಥಳೀಯ ಕಾಲಮಾನ ಮಂಗಳವಾರ ರಾತ್ರಿ 10.21ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಿದೆ. ವಂಡೆನ್ಬರ್ಗ್ ವಾಯುನೆಲೆಯಿಂದ ಸ್ಪೇಸ್ ಎಕ್ಸ್ನ ಫಾಲ್ಕೋನ್ 9 ರಾಕೆಟ್ ಮೂಲಕ ಈ ಉಡಾವಣಾ ಕಾರ್ಯ ನಡೆದಿದೆ.
ಉಡಾವಣೆಗೊಂಡ 55 ನಿಮಿಷಗಳ ಬಳಿಕ ಫಾಲ್ಕೋನ್ 9ರ ಸೆಕೆಂಡ್ ಸ್ಟೇಜ್ನಿಂದ ಗಗನ ನೌಕೆ ಪ್ರತ್ಯೇಕವಾಗಿದ್ದು, ಶೀಘ್ರವೇ ಸೂರ್ಯನ ಕಡೆಗೆ ತನ್ನಿಂತಾನೇ ಸಂಚರಿಸಲಿದೆ. ಡಾರ್ಟ್ ನೌಕೆಯು ಗಂಟೆಗೆ 24,000 ಕಿ.ಮೀ. (ಸೆಕೆಂಡ್ಗೆ 6.6 ಕಿ.ಮೀ.)ವೇಗದಲ್ಲಿ ಡಿಡಿಮೋಸ್ ಎಂಬ ಕ್ಷುದ್ರಗ್ರಹದ ಪಕ್ಕದಲ್ಲಿರುವ ಸಣ್ಣ 160 ಮೀಟರ್ ವ್ಯಾಸದ ಮೂನ್ಲೆಟ್ ಎಂಬ ಡಿಮೋಫೋಸ್ ಕ್ಷುದ್ರಗ್ರಹದ ಮೇಲೆ 2022ರ ಸೆ.26 ಮತ್ತು ಅ.1ರ ನಡುವೆ ಅಪ್ಪಳಿಸಲಿದೆ. ಮೆರಿಲ್ಯಾಂಡ್ನಲ್ಲಿರುವ ಜಾನ್ಸ್ ಹಾಪ್ಕಿನ್ಸ್ ಅಪ್ಲೈಡ್ ಫಿಸಿಕ್ಸ್ ಲ್ಯಾಬ್ ಡಾರ್ಟ್ ನೌಕೆಯನ್ನು ನಿರ್ವಿುಸಿದೆ.
ಕ್ಷುದ್ರಗ್ರಹದ ಪಥ ಬದಲಿಸುವ ಮಹತ್ವಾಕಾಂಕ್ಷೆಯ ಯೋಜನೆ
100 ವರ್ಷ ಭೂಮಿಗೆ ಅಪಾಯವಿಲ್ಲ: ಈಗ ಪರೀಕ್ಷೆಗೊಳಪಡಿಸುತ್ತಿರುವ ಮೂನ್ಲೆಟ್ನಿಂದಲೂ ಭೂಮಿಗೆ ಅಪಾಯ ಇಲ್ಲ. ಮುಂದಿನ 100 ವರ್ಷ ತನಕ ಭೂಮಿಗೆ ಕ್ಷುದ್ರಗ್ರಹ ಅಪ್ಪಳಿಸುವ ಯಾವುದೇ ಅಪಾಯ ಇಲ್ಲ. ಆದಾಗ್ಯೂ, ಮುನ್ನೆಚ್ಚರಿಕೆ ಕ್ರಮವಾಗಿ ಈ ಪರೀಕ್ಷೆ ನಡೆಸಲಾಗುತ್ತಿದೆ. ಯಾವುದೇ ಕ್ಷುದ್ರಗ್ರಹ ಬಂದರೂ ಅದು 140 ಮೀಟರ್ ವ್ಯಾಸಕ್ಕಿಂತ ದೊಡ್ಡದಾಗಿರಲ್ಲ. ಭೂಕಕ್ಷೆಗೆ ಸಮೀಪವಾಗಿ 25,00ಕ್ಕೂ ಹೆಚ್ಚು ಆಕಾಶಕಾಯಗಳಿವೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.
ಉದ್ದೇಶವೇನು?:
- ಕ್ಷುದ್ರಗ್ರಹದ ಚಲನಶೀಲ ಪ್ರಭಾವವನ್ನು ಪ್ರದರ್ಶಿಸುವುದು
- ಕ್ಷುದ್ರಗ್ರಹದ ದ್ವಿಪಥದ ಅವಧಿಯನ್ನು ಬದಲಾಯಿಸುವುದು
- ಭೂಮಿ ಮೇಲಿನ ಟೆಲಿಸ್ಕೋಪ್ ಬಳಸಿ ದ್ವಿಪಥದ ಅವಧಿ ಬದಲಾವಣೆ ಮೊದಲಿನ ಮತ್ತು ನಂತರದ ಪರಿಣಾಮಗಳನ್ನು ಅಳೆಯುವುದು