ಪೆರ್ಲ: ಕೋರೊನ ಕಾರಣ ಕಳೆದ ಒಂದೂವರೆ ವರ್ಷಗಳಿಂದ ನಿಶ್ಚಲವಾಗಿದ್ದ ಪೆರ್ಲ ಪೇಟೆಯಲ್ಲಿನ " ಶೀ ಲೋನ್ಜ್ " ಕಟ್ಟಡವನ್ನು ಕಾರ್ಯ ಪ್ರವತ್ತಗೊಳಿಸಲು ಪಂಚಾಯತ್ ಆಡಳಿತ ಸಮಿತಿ ತೀರ್ಮಾನಿಸಿದೆ.
ಜಿಲ್ಲೆಯಲ್ಲಿಯೇ ಅತೀ ವಿರಳವೆನಿಸಿದ ಈ ಮಹತ್ತರ ಯೋಜನೆ ನಗರಕ್ಕೆ ಆಗಮಿಸುವ ಮಹಿಳೆಯರ ವಿಶ್ರಾಂತಿ ಕೇಂದ್ರವಾಗಿ (ವಿಶೇಷವಾಗಿ ಮಗುವಿಗೆ ಎದೆ ಹಾಲೂಣಿಸುವ ಮಾತೆಯಂದಿರಿಗೆ) ಫಲಪ್ರದವಾಗುವಂತೆ ರಾಜ್ಯದ ಗಡಿ ಪ್ರದೇಶವಾಗಿರುವ ಎಣ್ಮಕಜೆ ಪಂಚಾಯತಿ ನೇತೃತ್ವದಲ್ಲಿ ಪೆರ್ಲ ಪೇಟೆಯಲ್ಲಿ ಸಾಕಾರಗೊಳಿಸಲಾಗಿತ್ತು. ಈ ನಡುವೆ ಜಗತ್ತಿಗೆ ಬಾಧಿಸಿದ ಕೋರೊನ ನಿಗ್ರಹಕ್ಕಾಗಿ ಪಂಚಾಯತಿ ಸಮರೋಪಾದಿಯ ಕಾರ್ಯಗಳನ್ನು ಕೈಗೆತ್ತಿಕೊಂಡಿತ್ತು. ಈ ಸಂದರ್ಭದಲ್ಲಿ ಪೇಟೆ ವ್ಯಾಪ್ತಿಯಲ್ಲಿ ಜನ ಸಂದಣಿಗೆ ಕಡಿವಾಣವಿದ್ದ ಕಾರಣ ಇದರ ಕಾರ್ಯ ಚಟುವಟಿಕೆಯನ್ನು ಅಲ್ಪ ಕಾಲಕ್ಕೆ ಸ್ಥಗಿತಗೊಳಿಸಬೇಕಾಗಿ ಬಂದಿತ್ತು. ಇದೀಗ ಪಂಚಾಯತ್ ಆಡಳಿತ ಸಮಿತಿಯು ಅಗತ್ಯ ಕ್ರಮಗಳನ್ನು ಕೈಗೊಂಡು ಸೀ ಲಾಂಚ್ ನ ಕಾರ್ಯ ಪ್ರವೃತ್ತಿಗೆ ಗಮನ ಹರಿಸಿದ್ದು ಈ ಕಟ್ಟಡದೊಳಗೆ ಶುಚಿತ್ವ ಕಾಪಾಡುವುದರೊಂದಿಗೆ ದಿನಂಪ್ರತಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯ ತನಕ ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಪೇಟೆ ಅಭಿವೃದ್ದಿಗೆ ಅನುಸರಿಸಿ ಮುಂದೆ ಇನ್ನಷ್ಟು ಸೌಕರ್ಯಗಳನ್ನು ಕಲ್ಪಿಸಲು ಪಂಚಾಯತು ಆಡಳಿತ ಸಮಿತಿಯು ತೀರ್ಮಾನಿಸಿದೆ ಎಂದು ಗ್ರಾ.ಪಂ. ಅಧ್ಯಕ್ಷ ಸೋಮಶೇಖರ್ ಜೆ.ಎಸ್.ತಿಳಿಸಿದ್ದಾರೆ.