ಕೊಚ್ಚಿ: ಸರ್ಕಾರ ನೀಡಿದ ಕೋವಿಡ್ ವ್ಯಾಕ್ಸಿನ್‌ನಿಂದ ಯಾರಾದರೂ ಉದ್ಯೋಗ ಕಳೆದುಕೊಂಡಿದ್ದರೆ ಅವರ ಅಹವಾಲು ಆಲಿಸುವುದು ಸರ್ಕಾರದ ಕರ್ತವ್ಯವಲ್ಲವೇ? ಎಂದು ಕೇರಳ ಹೈಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಸೌದಿ ಅರೇಬಿಯಾದಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ, ತಾನು ಮರಳಿ ಸೌದಿಗೆ ಕೆಲಸಕ್ಕೆ ಹೋಗಲು ಅಂತರರಾಷ್ಟ್ರೀಯ ಮಾನ್ಯತೆಯಿರುವ ಲಸಿಕೆಯನ್ನು ಮೂರನೇ ಡೋಸ್ ಆಗಿ ನೀಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಲು ಕೋರಿ, ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿತ್ತು.
ಅರ್ಜಿದಾರರು ಕೋವ್ಯಾಕ್ಸಿನ್ ಲಸಿಕೆಯ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಆದರೆ ಕೋವ್ಯಾಕ್ಸಿನ್ ಲಸಿಕೆಗೆ ಸೌದಿ ಇನ್ನೂ ಮಾನ್ಯತೆ ಅಥವಾ ಅನುಮತಿ ನೀಡಿಲ್ಲ. ಇದರಿಂದಾಗಿ ಅಲ್ಲಿಗೆ ಹೋಗಲು ಸಾಧ್ಯವಾಗದ ಕಾರಣ ಅರ್ಜಿದಾರರು, ಅಂತರರಾಷ್ಟ್ರೀಯ ಮಾನ್ಯತೆ ಇರುವ ಲಸಿಕೆಯನ್ನು ಮೂರನೇ ಡೋಸ್ ಆಗಿ ನೀಡುವಂತೆ ಕೋರಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್, ಇದಕ್ಕಾಗಿ ಕೋರ್ಟ್ ಕೇಂದ್ರ ಸರ್ಕಾರವನ್ನು ದೂರುವುದಿಲ್ಲ. ಆದರೆ ಸರ್ಕಾರ ನೀಡಿದ ಲಸಿಕೆಯ ಕಾರಣದಿಂದ ನಾಗರಿಕರು ಉದ್ಯೋಗ ಕಳೆದುಕೊಂಡರೆ ಅಥವಾ ಅವರ ಪ್ರಯಾಣಕ್ಕೆ ಅಡೆ ತಡೆ ಎದುರಾದರೆ ಆ ಕುರಿತ ಅಹವಾಲನ್ನು ಆಲಿಸುವುದು ಸರ್ಕಾರದ ಕೆಲಸವಲ್ಲವೇ? ಎಂದು ಪ್ರಶ್ನಿಸಿದರು.
ಕೋವ್ಯಾಕ್ಸಿನ್ ಲಸಿಕೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿರುವಾಗ ಸೌದಿ ಅರೇಬಿಯಾ ಏಕೆ ಮಾನ್ಯತೆ ನೀಡಿಲ್ಲ ಎಂಬುದರ ಕುರಿತು ಮಾಹಿತಿ ನೀಡುವಂತೆ ಕೇಂದ್ರದ ಪರವಾಗಿ ಹಾಜರಾಗಿದ್ದ ಸಹಾಯಕ ಸಾಲಿಸಿಟರ್ ಜನರಲ್ ಎಸ್. ಮನು ಅವರನ್ನು ಕೇಳಿತು.
ಸಾಂಕ್ರಾಮಿಕ ಸಂದರ್ಭವಾಗಿದ್ದರಿಂದ ಸರ್ಕಾರವು ಲಸಿಕೆಗೆ ಅಂತರರಾಷ್ಟ್ರೀಯ ಮಾನ್ಯತೆ ಪಡೆಯುವುದಕ್ಕೆ ಕಾಯುತ್ತಾ ಕೂರುವ ಬದಲಿಗೆ, ಜನರ ಜೀವ ಉಳಿಸುವುದಕ್ಕೆ ಒತ್ತು ನೀಡಿ ಲಸಿಕೆ ನೀಡಿತು ಎಂದು ಮನು ನ್ಯಾಯಾಲಯಕ್ಕೆ ತಿಳಿಸಿದರು. ನ್ಯಾಯಾಲಯವು ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಿತು.