ರಾಂಚಿ: ಹಣಕಾಸು ವ್ಯವಹಾರಗಳಲ್ಲಿ ತೊಡಗಿರುವವರಿಗೆ, ಉದ್ಯಮಪತಿಗಳಿಗೆ, ಉದ್ಯೋಗಿಗಳಿಗೆ ಬ್ಯಾಂಕ್ ಸೇವೆ ಅತ್ಯಗತ್ಯ. ಅವರು ನಿರಂತರವಾಗಿ ಒಂದಲ್ಲ ಒಂದು ರೀತಿಯಲ್ಲಿ ಬ್ಯಾಂಕ್ ಜೊತೆ ವ್ಯವಹರಿಸುತ್ತಿರುತ್ತಾರೆ.
ಮಕ್ಕಳಿಗಾಗಿಯೇ ಮುಡಿಪಾದ ಬ್ಯಾಂಕ್ ಕುರಿತು ಕೇಳಿದ್ದೀರಾ. ಉತ್ತರಾಖಂಡದ ರಾಂಚಿಯಲ್ಲಿ ಮಕ್ಕಳಿಗಾಗಿಯೇ ಇರುವ ಬ್ಯಾಂಕ್ ಕಾರ್ಯಾಚರಿಸುತ್ತಿದೆ. ಅದರ ಹೆಸರು ಬಾಲ್ ವಿಕಾಸ್ ಖಜಾನ.
ಈ ಬ್ಯಾಂಕ್ ನಲ್ಲಿ ಈಗಾಗಲೇ 600ಕ್ಕೂ ಹೆಚ್ಚು ಮಕ್ಕಳು ಖಾತೆಹೊಂದಿದ್ದು ವ್ಯವಹಾರ ನಡೆಸುತ್ತಿದ್ದಾರೆ ಎನ್ನುವುದು ಅಚ್ಚರಿಯ ಸಂಗತಿ. ಈ ಬ್ಯಾಂಕನ್ನು ಪ್ರತಿಗ್ಯಾ ಟ್ರಸ್ಟ್ ಸಂಸ್ಥೆ ನಡೆಸುತ್ತಿದೆ. ಕೊಳಚೆ ಪ್ರದೇಶದ ಮಕ್ಕಳಲ್ಲಿ ಬ್ಯಾಂಕ್ ಕುರಿತು ತಿಳಿವಳಿಕೆ ಮೂಡಿಸುವ ದೃಷ್ಟಿಯಿಂದ ಈ ಬ್ಯಾಂಕನ್ನು ಸ್ಥಾಪಿಸಲಾಗಿದೆ.
8-18ರ ವಯೋಮಾನದ ಮಕ್ಕಳು ಈ ಬ್ಯಾಂಕ್ ನಲ್ಲಿ ಖಾತೆ ತೆರೆಯಬಹುದಾಗಿದೆ. ಪ್ರಜಾಪ್ರಭುತ್ವ ಮೌಲ್ಯಗಳು, ಸಾಮಾಜಿಕ ಶಿಕ್ಷಣ ಮತ್ತು ಜೀವನಕ್ಕೆ ಅಗತ್ಯವಿರುವ ಕೌಶಲಗಳನ್ನು ಕಲಿಸುವುದು ಈ ಯೋಜನೆಯ ಉದ್ದೇಶ ಎಂದು ಟ್ರಸ್ಟ್ ನ ಅಧಿಕಾರಿಗಳು ಹೇಳುತ್ತಾರೆ.
ಬ್ಯಾಂಕ್ ವ್ಯವಹಾರಗಳ ನಿರ್ವಹಣೆಯನ್ನು ದೊಡ್ಡವರೇ ನಿರ್ವಹಿಸುತ್ತಿದ್ದರೂ, ಪ್ರತಿಭಾನ್ವಿತ ಮಕ್ಕಳನ್ನು ಆರಿಸಿ ಅವರಿಗೆ ಗುರುತರ ಜವಾಬ್ದಾರಿಯನ್ನು ವಹಿಸಲಾಗುತ್ತಿದೆ.