ನವದೆಹಲಿ: ಗ್ರಾಹಕ ಸಂರಕ್ಷಣಾ ಕಾಯ್ದೆ ವ್ಯಾಪ್ತಿಯೊಳಗೆ ಶಿಕ್ಷಣ ಸೇವೆಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಸಮ್ಮತಿ ನೀಡಿದೆ.
ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಬಿ.ವಿ. ನಾಗರತ್ನಾ ಅವರನ್ನೊಳಗೊಂಡ ನ್ಯಾಯಪೀಠವು, ಇದೇ ರೀತಿಯ ಕಾನೂನು ಸಮಸ್ಯೆ ಹೊಂದಿರುವ ಮತ್ತೊಂದು ಪ್ರಕರಣದ ತೀರ್ಪು ಬಾಕಿ ಇರುವುದನ್ನು ಗಮನಿಸಿ, ಅದನ್ನು ಇದೇ ವಿಷಯದೊಂದಿಗೆ ಸೇರಿಸಲು ಸೂಚಿಸಿದೆ.
'2020ರ ಸಿವಿಲ್ ಮೇಲ್ಮನವಿ ಸಂಖ್ಯೆ 3504 (ಮನು ಸೋಲಂಕಿ ಮತ್ತು ಇತರರು ವಿರುದ್ದ ವಿನಾಯಕ ಮಿಷನ್ ಯುನಿವರ್ಸಿಟಿ) ಬಾಕಿ ಪ್ರಕರಣವನ್ನು ಪರಿಗಣಿಸಿ, ಶಿಕ್ಷಣವು ಗ್ರಾಹಕ ಸಂರಕ್ಷಣಾ ಕಾಯ್ದೆಯೊಳಗಿನ ಸೇವೆಯಾಗಿದೆಯೇ ಎಂಬ ವಿಷಯವು ನ್ಯಾಯಾಲಯದ ಮುಂದೆ ಬಾಕಿ ಉಳಿದಿದೆ. ಇದನ್ನು ಶಿಕ್ಷಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣದ ಜತೆಗೆ ಸೇರಿಸಲಾಗಿದೆ' ಎಂದು ಅ. 29ರ ಆದೇಶದಲ್ಲಿ ನ್ಯಾಯಪೀಠವು ತಿಳಿಸಿದೆ.
'ಶಿಕ್ಷಣ ಸಂಸ್ಥೆಗಳು ಗ್ರಾಹಕ ಸಂರಕ್ಷಣಾ ಕಾಯ್ದೆ 1986ರ ವ್ಯಾಪ್ತಿಗೆ ಬರುವುದಿಲ್ಲ ಮತ್ತು ಈಜು ಮುಂತಾದ ಸಹಪಠ್ಯ ಚಟುವಟಿಕೆಗಳು ಶಿಕ್ಷಣ ಸೇವೆ ವ್ಯಾಪ್ತಿಗೆ ಬರುವುದಿಲ್ಲ' ಎಂಬ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಆದೇಶವನ್ನು ಪ್ರಶ್ನಿಸಿ ಲಖನೌ ನಿವಾಸಿಯೊಬ್ಬರು ಸಲ್ಲಿಸಿರುವ ಮೇಲ್ಮನವಿಯನ್ನು ನ್ಯಾಯಪೀಠವು ವಿಚಾರಣೆಗೆ ಕೈಗೆತ್ತಿಕೊಂಡಿದೆ.
ಏನಿದು ಪ್ರಕರಣ?: ಲಖನೌದ ನಿವಾಸಿಯಾಗಿರುವ ಅರ್ಜಿದಾರರ ಮಗ ತಾನು ಓದುತ್ತಿದ್ದ ಶಾಲೆಯಲ್ಲಿ 2007ರಲ್ಲಿ ಬೇಸಿಗೆ ಶಿಬಿರದಲ್ಲಿ ಈಜು ತರಬೇತಿಗೆ ಸೇರಿಕೊಂಡಿದ್ದ. ಈ ಶಿಬಿರಕ್ಕಾಗಿ ವಿದ್ಯಾರ್ಥಿಯಿಂದ ₹ 1 ಸಾವಿರ ಶುಲ್ಕ ಪಡೆಯಲಾಗಿತ್ತು.
2007ರ ಮೇ 28ರ ಬೆಳಿಗ್ಗೆ 9.30ರ ವೇಳೆಗೆ ವಿದ್ಯಾರ್ಥಿಯ ತಂದೆಗೆ ಶಾಲೆಯಿಂದ ನಿಮ್ಮ ಮಗ ಅಸ್ವಸ್ಥನಾಗಿದ್ದು, ಕ್ಷಣವೇ ಬನ್ನಿ ಎಂಬ ಕರೆ ಬಂದಿತ್ತು. ತಂದೆಯು ಶಾಲೆಗೆ ತಲುಪಿದಾಗ, ನಿಮ್ಮ ಮಗ ಶಾಲೆಯ ಈಜುಕೊಳದಲ್ಲಿ ಮುಳುಗಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ' ಎಂದು ತಿಳಿಸಲಾಯಿತು. ನಂತರ ಅವರು ಆಸ್ಪತ್ರೆಗೆ ಧಾವಿಸಿದಾಗ, ಮಗ ಸಾವಿಗೀಡಾಗಿರುವ ವಿಷಯ ತಿಳಿದುಬಂದಿತು.
ತಂದೆಯು, ಶಾಲೆಯ ಆಡಳಿತ ಮಂಡಳಿ ನಿರ್ಲಕ್ಷ್ಯ ಮತ್ತು ಸೇವೆಯಲ್ಲಿನ ನ್ಯೂನತೆ ಬಗ್ಗೆ ರಾಜ್ಯ ಗ್ರಾಹಕರ ವ್ಯಾಜ್ಯಗಳ ಆಯೋಗದಲ್ಲಿ ದೂರು ದಾಖಲಿಸಿದರು. ಮಗನ ಸಾವಿಗೆ ಪರಿಹಾರವಾಗಿ ₹ 20 ಲಕ್ಷ ಜೊತೆಗೆ ಅವರು ಅನುಭವಿಸಿದ ಮಾನಸಿಕ ಸಂಕಟಕ್ಕಾಗಿ ₹ 2 ಲಕ್ಷ ಮತ್ತು ವ್ಯಾಜ್ಯದ ವೆಚ್ಚಕ್ಕೆ ₹ 55 ಸಾವಿರ ಪರಿಹಾರ ನೀಡಬೇಕೆಂದು ಕೋರಿದ್ದರು.
ದೂರುದಾರರು ಗ್ರಾಹಕರಲ್ಲ ಎಂಬ ಕಾರಣ ನೀಡಿ ರಾಜ್ಯ ಗ್ರಾಹಕರ ವ್ಯಾಜ್ಯಗಳ ಆಯೋಗವು ದೂರನ್ನು ವಜಾಗೊಳಿಸಿತ್ತು. ನಂತರ ಅರ್ಜಿದಾರರು, ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೊಕ್ಕಾಗ, ಆಯೋಗವು 'ಈಜು ಮುಂತಾದ ಸಹಪಠ್ಯ ಚಟುವಟಿಕೆಗಳನ್ನು ಒಳಗೊಂಡಿರುವ ಶಿಕ್ಷಣವು ಗ್ರಾಹಕ ಸಂರಕ್ಷಣಾ ಕಾಯಿದೆ, 1986ರ ಅರ್ಥದಲ್ಲಿ 'ಸೇವೆ' ಅಲ್ಲ' ಎಂದು ಹೇಳಿತ್ತು.