ಕೊಚ್ಚಿ: ಕೇರಳದ ಇಬ್ಬರು ಮಾಡೆಲ್ಗಳ ಜೀವ ಕಸಿದ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಅಪಘಾತಕ್ಕೂ ಮುನ್ನ ಹೋಟೆಲ್ನಲ್ಲಿ ನಡೆದಿದೆ ಎನ್ನಲಾದ ಡಿಜೆ ಪಾರ್ಟಿಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯ ತುಣುಕುಗಳನ್ನು ಪಡೆಯುವಲ್ಲಿ ಪೊಲೀಸರು ಎಡವಿದ್ದಾರೆ.
ಕೊಚ್ಚಿ: ಕೇರಳದ ಇಬ್ಬರು ಮಾಡೆಲ್ಗಳ ಜೀವ ಕಸಿದ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಅಪಘಾತಕ್ಕೂ ಮುನ್ನ ಹೋಟೆಲ್ನಲ್ಲಿ ನಡೆದಿದೆ ಎನ್ನಲಾದ ಡಿಜೆ ಪಾರ್ಟಿಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯ ತುಣುಕುಗಳನ್ನು ಪಡೆಯುವಲ್ಲಿ ಪೊಲೀಸರು ಎಡವಿದ್ದಾರೆ.
ಪೊಲೀಸರು ಪೋರ್ಟ್ ಕೊಚ್ಚಿಯ ನಂ.18 ಹೋಟೆಲ್ ಮೇಲೆ ದಾಳಿ ಮಾಡಿ ಸಿಸಿಟಿವಿಯ ಹಾರ್ಡ್ ಡಿಸ್ಕ್ ಅನ್ನು ವಶಕ್ಕೆ ಪಡೆದುಕೊಂಡಿದ್ದರು. ಆದಾಗ್ಯೂ ಹಾರ್ಡ್ ಡಿಸ್ಕ್ನಿಂದ ಡಿಜೆ ಪಾರ್ಟಿ ದೃಶ್ಯಗಳನ್ನು ಪೊಲೀಸರು ಮರಳಿ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಬುಧವಾರ ಮತ್ತೊಮ್ಮೆ ಹೋಟೆಲ್ ಮೇಲೆ ದಾಳಿ ಮಾಡಲು ಪೊಲೀಸರು ನಿರ್ಧಾರ ಮಾಡಿದ್ದರು.
ಕಾರು ಅಪಘಾತಕ್ಕೂ ಮುನ್ನ ಇಬ್ಬರು ಮಾಡೆಲ್ಗಳು ಡಿಜೆ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅಪಘಾತದ ಬೆನ್ನಲ್ಲೇ ಸಿಸಿಟಿವಿಯ ಹಾರ್ಡ್ ಡಿಸ್ಕ್ ಅನ್ನು ತೆಗೆದುಹಾಕಿದ್ದಾರೆಂಬ ಅನುಮೂನ ಮೂಡಿದೆ. ಆದರೂ, ಪೊಲೀಸರಿಗೆ ಕೆಲವೊಂದು ಮಹತ್ವದ ಸುಳಿವುಗಳು ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಹೋಟೆಲ್ ಸಿಬ್ಬಂದಿಯನ್ನು ವಿಚಾರಣೆ ನಡೆಸಲಿದ್ದಾರೆಂಬ ಮಾಹಿತಿ ತಿಳಿದುಬಂದಿದೆ.
ಪೋರ್ಟ್ ಕೊಚ್ಚಿ ಪೊಲೀಸ್ ಠಾಣೆ ಎದುರೇ ಹೋಟೆಲ್ ಇದೆ. ಪಾರ್ಟಿ ಮುಗಿಸಿಕೊಂಡು ಅನ್ಸಿ ಕಬೀರ್, ಅಂಜನಾ ಶಾಜನ್, ಆಶಿಕ್ ಮತ್ತು ಅಬ್ದುಲ್ ರೆಹಮಾನ್ ಅಕ್ಟೋಬರ್ 31ರಂದು ಮನೆಗೆ ಬರುತ್ತಿದ್ದರು. ಈ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಿಸ್ ಕೇರಳ ವಿಜೇತರಾದ ಅನ್ಸಿ ಕಬೀರ್ ಮತ್ತು ಅಂಜನಾ ಶಾಜನ್ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಆಶಿಕ್ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಕಾರು ಚಾಲನೆ ಮಾಡುತ್ತಿದ್ದ ಅಬ್ದುಲ್ ರೆಹಮಾನ್ನನ್ನು ಮೊನ್ನೆಯಷ್ಟೇ ಪೊಲೀಸರು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿ ಕಾರು ಚಲಾಯಿಸುತ್ತಿದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಹೀಗಾಗಿ ರೆಹಮಾನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.