ನವದೆಹಲಿ: ಕೋವಿಡ್ ಸಾಂಕ್ರಾಮಿಕವು ಮಕ್ಕಳ ಆರೋಗ್ಯದ ಮೇಲೆ ಬೀರಿದ ಪರಿಣಾಮಕ್ಕಿಂತ ಅವರ ಭವಿಷ್ಯದ ಮೇಲೆ ಬೀರಿದ ಪರಿಣಾಮ ಹೆಚ್ಚು ಮಾರಕವಾಗಿದೆ. ಕಳೆದ ಒಂದುವರೆ ವರ್ಷದಿಂದ ದೇಶದಲ್ಲಿ ಶಾಲೆ ಇಲ್ಲದೆ ಅಲೆದಾಡುತ್ತಿರುವ ಮಕ್ಕಳನ್ನು ಕಠಿಣ ದುಡಿಮೆಗೆ ಇಳಿಸುವ ಕಳ್ಳಸಾಗಣೆ ದಂಧೆ ಉಲ್ಬಣಿಸಿದೆ. ಎನ್‍ಜಿಒವೊಂದರ ಮುಖ್ಯಸ್ಥರು ಈ ಕಳ್ಳಸಾಗಣೆ ಜಾಲದ ಕಠೋರ ಸಂಗತಿಗಳ ಕುರಿತು ಮಾಹಿತಿ ನೀಡಿದ್ದಾರೆ.
ಸಾಗಣೆಗೆ ಲಕ್ಷುರಿ ಬಸ್: ಹಿಂದೆ ಕೋವಿಡ್ ಪೂರ್ವದಲ್ಲಿ ರೈಲುಗಳು ಸಮಯಕ್ಕೆ ಸರಿಯಾಗಿ ಸಂಚರಿಸುತ್ತಿದ್ದವು. ಈ ಮೂಲಕವೇ ಕಳ್ಳಸಾಗಣೆದಾರರು ಮಕ್ಕಳನ್ನು ನಿರ್ದಿಷ್ಟ ತಾಣಕ್ಕೆ ರೈಲುಗಳ ಮೂಲಕ ಸಾಗಿಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ರೈಲುಗಳ ಸಂಚಾರ ಸಮಯ ಏರುಪೇರಾಗಿದೆ. ಇದಕ್ಕೆ ತಕ್ಕಂತೆ ಮಕ್ಕಳ ಕಳ್ಳಸಾಗಣೆಯ ವಿಧಾನ ಕೂಡ ಬದಲಾಗಿದೆ. ರೈಲಿನ ಬದಲು ಈಗ ಲಕ್ಷುರಿ ಬಸ್‍ಗಳನ್ನು ಪಾತಕಿಗಳು ಬಳಸುತ್ತಿದ್ದಾರೆ.
ಕಿಟಕಿಗಳಿಗೆ ಬಣ್ಣದ ಪೇಪರ್ ಅಂಟಿಸಿದ ಐಷಾರಾಮಿ ಬಸ್‍ಗಳಲ್ಲಿ ಮಕ್ಕಳನ್ನು ತುಂಬಿಕೊಂಡು ಅಪವೇಳೆಯಲ್ಲಿ ಸಾಗಿಸಲಾಗುತ್ತಿದೆ. ಇದನ್ನು ಪತ್ತೆ ಮಾಡಿ, ಮುಗ್ಧ ಮಕ್ಕಳನ್ನು ರಕ್ಷಿಸುವುದು ಸರಕಾರಿ ಸಂಸ್ಥೆ ಮತ್ತು ಎನ್‍ಜಿಒಗಳಿಗೆ ಕಷ್ಟಕರವಾಗಿದೆ.
'ಹಿಂದೆ ನಮಗೆ ರೈಲುಗಳ ಟೈಮಿಂಗ್ ಗೊತ್ತಿತ್ತು. ನಿಲ್ದಾಣಗಳ ಮಾಹಿತಿ ಪಕ್ಕಾ ಇತ್ತು. ಮುಖ್ಯವಾಗಿ ಇಂತಹ ಕಡೆ ಒಬ್ಬಂಟಿಯಾಗಿ ಅಲೆದಾಡುವ ಮಕ್ಕಳ ಮೇಲೆ ನಾವು ಸುಲಭವಾಗಿ ನಿಗಾ ಇರಿಸಬಹುದಾಗಿತ್ತು. ಆದರೆ ಈಗ ಲಕ್ಷುರಿ ಬಸ್‍ಗಳಲ್ಲಿ ಅವಿತಿಟ್ಟು ಸಾಗಿಸುವ ಮಕ್ಕಳನ್ನು ಪತ್ತೆ ಮಾಡುವುದು ಹೇಗೆ? ನಿತ್ಯ ಸಂಚರಿಸುವ ಲಕ್ಷಾಂತರ ಬಸ್ಸುಗಳ ಪೈಕಿ ಮಕ್ಕಳನ್ನು ಕಳ್ಳಸಾಗಣೆ ಮಾಡುವ ನಿರ್ದಿಷ್ಟ ಬಸ್ ಗುರುತಿಸಿ ತಡೆಯುವುದು ಸುಲಭದ ಕೆಲಸ ಅಲ್ಲ. ಇದರಿಂದಾಗಿ ಇತ್ತಿ?ಚೆಗೆ ಮಕ್ಕಳ ಕಳ್ಳಸಾಗಣೆ ಹೆಚ್ಚಿದೆ' ಎನ್ನುತ್ತಾರೆ 'ಸೆಂಟರ್ ಡೈರೆಕ್ಟ್' ಎನ್‍ಜಿಒ ನಿರ್ದೇಶಕ ಸುರೇಶ್ ಕುಮಾರ್.
ಕಳ್ಳಸಾಗಣೆಯ ಲಕ್ಷುರಿ ಬಸ್ಸುಗಳ ಚಾಲಕರಿಗೆ ವೇಳಾಪಟ್ಟಿ ಇರುವುದಿಲ್ಲ. ಅವರು ಚಾಲಾಕಿಗಳು, ಹಗಲು ಗುಪ್ತ ಸ್ಥಳದಲ್ಲಿ ನಿಲ್ಲಿಸಿ ರಾತ್ರಿ ವೇಳೆ ಮಕ್ಕಳನ್ನು ತುಂಬಿಸಿಕೊಂಡು ಪರಾರಿಯಾಗುತ್ತಾರೆ. ಸಂಶಯ ಬಂದ ಮಾರ್ಗಗಳಲ್ಲಿ ಅವರು ಸಂಚರಿಸುವುದೇ ಇಲ್ಲ. ಎಲ್ಲಾದರೂ ಅಧಿಕಾರಿಗಳು ಕೈಅಡ್ಡ ಹಾಕಿ ತಡೆದರೆ ನಿಲ್ಲಿಸುವುದು ಅಪರೂಪ. ನುಗ್ಗಿಸಿಕೊಂಡು ಪರಾರಿಯಾಗುತ್ತಾರೆ.
'ಇತ್ತೀಚೆಗೆ ಬಿಹಾರದಲ್ಲಿ ಲಕ್ಷುರಿ ಬಸ್ಸುಗಳಲ್ಲಿ ಸಾಗಿಸುತ್ತಿದ್ದ 75 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಆದರೆ ನೂರಾರು ಮಕ್ಕಳ ಕಳ್ಳಸಾಗಣೆ ಕಣ್ತಪ್ಪಿ ಹೋಗಿದೆ' ಎಂದು ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ. 'ನಮ್ಮ ಕಣ್ಣೆದುರೇ ಅಂತಹ ಘಟನೆಗಳು ನಡೆದಿವೆ. ಸ್ಥಳಕ್ಕೆ ಧಾವಿಸಿ ತಡೆಯುವ ಮೊದಲೇ ಮಕ್ಕಳ ಸಮೇತ ಪರಾರಿಯಾಗಿದ್ದಾರೆ ಖದೀಮರು' ಎಂದು ಹೇಳಿದರು.