ಕೊಯಮತ್ತೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ನಿಷೇಧ ಮಾಡುವುದು ಬೇಡ ಎಂದು ಇಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್ ಹೇಳಿದ್ದಾರೆ. ಪಟಾಕಿ ನಿಷೇಧದ ಬದಲು ಪರ್ಯಾಯವಾಗಿ ಸರಳ ಯೋಜನೆ ರೂಪಿಸಬಹುದು ಎಂದು ಅವರು ಹೇಳಿದ್ದಾರೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಂದೇಶ ನೀಡಿದ ಅವರು, 'ಮಕ್ಕಳು ಪಟಾಕಿಯ ಆನಂದ ಅನುಭವಿಸುವುದನ್ನು ತಡೆಯಲು ವಾಯು ಮಾಲಿನ್ಯದ ಕುರಿತಾದ ಕಾಳಜಿ ಸಕಾರಣವಲ್ಲ.
ಮಕ್ಕಳು ಆನಂದಿಸಲಿ' ಎಂದು ಹೇಳಿದ್ದಾರೆ.
'ನಿಮ್ಮನ್ನು ಕತ್ತಲೆಗೆ ತಳ್ಳಬಲ್ಲ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಸಂತೋಷ, ಪ್ರೀತಿ ಮತ್ತು ಪ್ರಜ್ಞೆಯನ್ನು ಬೆಳಗುವುದು ಬಹು ಮುಖ್ಯ. ಮಾನವೀಯತೆಯ ಪೂರ್ಣ ವೈಭವವನ್ನು ಬೆಳಗಿಸಿ' ಎಂದು ಅವರು ಹೇಳಿದ್ದಾರೆ.
ಈ ವರ್ಷ ಕಾಳಿ ಪೂಜೆ, ದೀಪಾವಳಿ ಮತ್ತು ಇತರ ಹಬ್ಬಗಳ ಸಂದರ್ಭದಲ್ಲಿ ಪಟಾಕಿಗಳನ್ನು ನಿಷೇಧಿಸುವ ಕಲ್ಕತ್ತಾ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿತ್ತು. ಪಟಾಕಿ ಮಾರಾಟಕ್ಕೆ ನಿಷೇಧ ಹೇರಲು ಸಾಧ್ಯವಿಲ್ಲ. ಆದರೆ ಕಡಿಮೆ ಮಾಲಿನ್ಯ ಉಂಟು ಮಾಡುವ ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬಹುದು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತ್ತು.