ಬರ್ಲಿನ್: ಜರ್ಮನಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆ ಕಾಣುತ್ತಿದೆ. ಗುರುವಾರ ಒಂದೇ ದಿನ ದೇಶಾದ್ಯಂತ ಒಟ್ಟು 50,000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.
ಏರುತ್ತಿರುವ ಕೊರೊನಾ ಸೋಂಕನ್ನು ತಹಬದಿಗೆ ತರಲು ಸರ್ಕಾರ ಹೊಸ ಮಾರ್ಗಸೂಚಿಯನ್ನು ತರಲು ನಿರ್ಧರಿಸಿದೆ. ಈ ಕುರಿತಾಗಿ ಸರ್ಕಾರ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಜೊತೆ ಸಂಪರ್ಕದಲ್ಲಿದೆ.
ಜರ್ಮನಿಯ ಖ್ಯಾತ ವೈರಾಣು ತಜ್ಞರಾದ ಕ್ರಿಶ್ಚಿಯನ್ ದ್ರೊಸ್ಟೆನ್ ಅವರು ಕೆಲವೇ ತಿಂಗಳಲ್ಲಿ 1 ಲಕ್ಷ ಮಂದಿ ಕೊರೊನಾಗೆ ಪ್ರಾಣ ಕಳೆದುಕೊಳ್ಳಲಿದ್ದಾರೆ ಎಂದು ಬುಧವಾರ ಎಚ್ಚರಿಸಿದ್ದರು. ಅದರೊಳಗಾಗಿ ಲಸಿಕಾ ಹಂಚಿಕೆ ಕಾರ್ಯಕ್ರಮವನ್ನು ಸಮರ್ಥವಾಗಿ ನಡೆಸುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದರು.
ನಾಗರಿಕರಿಗೆ ಲಸಿಕೆ ಕಡ್ಡಾಯ ಮಾಡಲು ಜರ್ಮನಿ ಸರ್ಕಾರ ಮೀನ ಮೇಷ ಎಣಿಸುತ್ತಿದೆ. ಜನರು ಸ್ವಯಂಪ್ರೇರಿತರಾಗಿ ಲಸಿಕೆ ಪಡೆಯುವಂತೆ ಮಾಡಲು ಸರ್ಕಾರ ಹೆಣಗಾಡುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮತ್ತೆ ಕೊರೊನಾ ದೇಶಾದ್ಯಂತ ತಾಂಡವವಾಡಲಿದೆ.