ಕುಂಬಳೆ/ಮುಳ್ಳೇರಿಯ: ಕುಂಬಳೆ-ಬದಿಯಡ್ಕ-ಮುಳ್ಳೇರಿಯ ಚತುಷ್ಪಥ ರಸ್ತೆ ಕಾಮಗಾರಿ ಭಾರೀ ಸಜ್ಜೀಕರಣದೊಂದಿಗೆ ಆರಂಭಗೊಂಡಿದೆ. ರೀಬಿಲ್ಡ್ ಕೇರಳ ಯೋಜನೆಯ ಭಾಗವಾಗಿ ಕುಂಬಳೆ-ಮುಳ್ಳೇರಿಯ 29 ಕೀಲೋಮೀಟರ್ ರಸ್ತೆ ಕಾಮಗಾರಿ ಕೆಎಸ್‍ಟಿಪಿ (ಕೇರಳ ಸ್ಟೇಟ್ ಟ್ರಾನ್ಸ್ ಪೋರ್ಟ್ ಪ್ರಾಜೆಕ್ಟ್)ಉಸ್ತುವಾರಿಯಲ್ಲಿ 158 ಕೋಟಿ.ರೂಗಳನ್ನು ವ್ಯಯಿಸಿ ಕಾಮಗಾರಿ ಆರಂಭಿಸಲಾಗಿದೆ.
ಪ್ರಸ್ತುತ ರಸ್ತೆಯ ಇಕ್ಕೆಲಗಳನ್ನು ಅಗಲಗೊಳಿಸುವುದು, ಮೋರಿ ಸಕಗಳ ನಿರ್ಮಾಣ ಆರಂಭಗೊಂಡಿದೆ. ಕನ್ನೆಪ್ಪಾಡಿ-ಬದಿಯಡ್ಕ ಮಧ್ಯೆ ಕಾಂತಿಲ ಎಂಬಲ್ಲಿ ಹಾದುಹೋಗುವ ಈ ರಸ್ತೆಯ ಒಂದು ಕಿಲೋಮೀಟರ್ ಗಳಷ್ಟು ದೂರ ಎರಡರಿಂದ ಐದು ಮೀಟರ್ ಗಳಷ್ಟು ಎತ್ತರಕ್ಕೆ ಗುಡ್ಡ ಸಮತಟ್ಟುಗೊಳಿಸಿ ಮೂರು ಮೀಟರ್ ಅಗಲಗೊಳಿಸುವ ಕಾಮಗಾರಿ ನಡೆಯುತ್ತಿದೆ. ಇದರಲ್ಲಿ 150 ಮೀಟರ್ ಗುಡ್ಡ ಸಮತಟ್ಟುಗೊಳಿಸಿ ತಡೆಗೋಡೆ ಕಾಮಗಾರಿ ನಡೆಯುತ್ತಿದೆ. ಕೆಲವೆಡೆ ಅಗಲಗೊಳಿಸದೆ ತಡೆಗೋಡೆ ನಿರ್ಮಿಸಲಾಗುವುದು. ಲಭ್ಯ ಸರ್ಕಾರಿ ಸ್ಥಳದೊಳಗೆ ಕಾಮಗಾರಿ ನಡೆಯಲಿದೆ. ಇದರಿಂದ ಜನಸಾಮಾನ್ಯರ ಸ್ಥಳಗಳ ವಿವಾದಗಳು ಹುಟ್ಟಿಕೊಳ್ಳದೆ ಸುಗಮ ಕಾಮಗಾರಿ ಶೀಘ್ರ ಪೂರ್ಣಗೊಳಿಸಬಹುದಾಗಿದೆ. ವಾಹನಗಳಿಗೆ ದಿಕ್ಕು ಬದಲಾಯಿಸಿ ತೆರಳಲು ಸೌಕರ್ಯಕ್ಕಾಗಿ ಕಾಂತಿಲದಲ್ಲಿ ಗುಡ್ಡ ಅಗೆದು ಅಗಲ ಹೆಚ್ಚಿಸಲಾಗುತ್ತದೆ.
ಕುಂಬಳೆ, ಸೀತಾಂಗೋಳಿ, ನೀರ್ಚಾಲು, ಬದಿಯಡ್ಕ ಪೇಟೆಗಳ ಮೂಲಕ ಹಾದುಹೋಗುವ ರಸ್ತೆಯನ್ನು 24.5 ಮೀಟರ್ ಅಗಲದಲ್ಲಿ ಚತುಷ್ಪಥಗೊಳಿಸಲಾಗುವುದು. ಪ್ರಧಾನ ಕಾಮಗಾರಿಗಳಲ್ಲಿ ಅಗತ್ಯವಿರುವೆಡೆ ಗುಡ್ಡ ಅಗೆದು ತಡೆಗೋಡೆ ನಿರ್ಮಿಸಲಾಗುವುದು. ರಸ್ತೆಗಳ ಇಕ್ಕೆಲ 14 ಕೀ.ಮೀ ಚರಂಡಿ ನಿರ್ಮಿಸಲಾಗುವುದು. ಕುಂಬಳ|ಎ-ಮುಳ್ಳೇರಿಯ ಮಧ್ಯೆ 32 ಮೋರಿ ಸ|ಂಕ(ಕಲ್ವರ್ಟ್) ನಿರ್ಮಾಣ ಇದೀಗ ಭರದಿಂದಸ ಸಾಗುತ್ತಿದೆ.
ಅಭಿಮತ:
ಯೋಜನೆಯನ್ನು ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ದೀರ್ಘ ದೂರ ಮತ್ತು ಗುಡ್ಡ ಪ್ರದೇಶಗಳು ಇರುವುದರಿಂದ ಅಲ್ಪ ಸವಾಲಾದರೂ ಯೋಜನೆಯನ್ನು ಸಮರ್ಥವಾಗಿ ಯಶಸ್ವಿಗೊಳಿಸುವ ಗುರಿ ಹೊಂದಲಾಗಿದೆ. ಸರ್ಕಾರದ ಭೂಮಿಯನ್ನೇ ಗರಿಷ್ಠ ಬಳಸಿ ರಸ್ತೆ ಅಗಲೀಕರಣಗೊಳಿಸಲಾಗುವುದು. ಇದರಿಂದ ಖಾಸಗೀ ವ್ಯಕ್ತಿಗಳಿಗೆ ತೊಂದರೆಗಳಾಗದು. ಹೆಚ್ಚು ಕಲ್ವರ್ಟ್‍ಗಳು ಬೇಕಾಗುವುದರಿಂದ ಆರಂಭದಲ್ಲಿ ಅದನ್ನೇ ನಿರ್ಮಿಸಲಾಗುತ್ತಿದೆ. ದಕ್ಷ ರೀತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು.
-ಆರತಿ
ಕೆಎಸ್‍ಟಿಪಿ ಅಭಿಯಂತರರು. ಕುಂಬಳೆ-ಮುಳ್ಳೇರಿಯ ಡಿವಿಒಷನ್