ನವದೆಹಲಿ: ದೇಶದ ರಾಜಧಾನಿಯಲ್ಲಿ ವಾಹನಗಳಿಂದ ಆಗುತ್ತಿರುವ ಮಾಲಿನ್ಯ ತಗ್ಗಿಸಲು ದೆಹಲಿ ಸರ್ಕಾರ 100 ಸಿಗ್ನಲ್ ಇರುವ ಸ್ಥಳಗಳಲ್ಲಿ ಎರಡನೇ ಹಂತದ 'ರೆಡ್ ಲೈಟ್ ಆನ್, ಗಾಡಿ ಆಫ್' (ಕೆಂಪುದೀಪ ಹೊತ್ತಿಕೊಂಡಾಗ, ವಾಹನ ಆಫ್ ಮಾಡಿ) ಅಭಿಯಾನ ಆರಂಭಿಸಿದೆ.
ನವದೆಹಲಿ: ದೇಶದ ರಾಜಧಾನಿಯಲ್ಲಿ ವಾಹನಗಳಿಂದ ಆಗುತ್ತಿರುವ ಮಾಲಿನ್ಯ ತಗ್ಗಿಸಲು ದೆಹಲಿ ಸರ್ಕಾರ 100 ಸಿಗ್ನಲ್ ಇರುವ ಸ್ಥಳಗಳಲ್ಲಿ ಎರಡನೇ ಹಂತದ 'ರೆಡ್ ಲೈಟ್ ಆನ್, ಗಾಡಿ ಆಫ್' (ಕೆಂಪುದೀಪ ಹೊತ್ತಿಕೊಂಡಾಗ, ವಾಹನ ಆಫ್ ಮಾಡಿ) ಅಭಿಯಾನ ಆರಂಭಿಸಿದೆ.
ದೆಹಲಿ ಸರ್ಕಾರದ ಪರಿಸರ ಸಚಿವ ಗೋಪಲ್ ರೈ ಅವರು ಶುಕ್ರವಾರ ಐಟಿಒ ಕ್ರಾಸಿಂಗ್‌ಗೆ ಭೇಟಿ ನೀಡಿ, ಅಭಿಯಾನವನ್ನು ಬೆಂಬಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ವಾಹನಗಳಿಂದ ಆಗುತ್ತಿರುವ ಮಾಲಿನ್ಯವನ್ನು ಅರಿತ ಸರ್ಕಾರ ಮೊದಲ ಹಂತವಾಗಿ ಅ.18ರಿಂದ ನ.18ರವರೆಗೆ ಈ ಅಭಿಯಾನ ಕೈಗೊಂಡಿತ್ತು. ಈಗ ಶುಕ್ರವಾರದಿಂದ ಎರಡನೇ ಹಂತದ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.
'ದೆಹಲಿಯ ವಾಯು ಮಾಲಿನ್ಯಕ್ಕೆ ವಾಹನಗಳು ಹೊರಸೂಸುತ್ತಿರುವ ಹೊಗೆಯ ಕೊಡುಗೆಯೂ (ಶೇ 30) ಹೆಚ್ಚಿದೆ ಎಂಬುದನ್ನು ವಿವಿಧ ಸಂಶೋಧನೆಗಳು ತೋರಿಸಿವೆ' ಎಂದು ರೈ ಹೇಳಿದರು.
'ಸಾಮಾನ್ಯವಾಗಿ ವಾಹನ ಚಾಲಕರು ನಿತ್ಯ ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಸರಾಸರಿ 20ರಿಂದ 25 ನಿಮಿಷ ಇಂಧನ ಸುಡುತ್ತಾರೆ. ಇದು ಇಂಧನ ವ್ಯರ್ಥ ಹಾಗೂ ಮಾಲಿನ್ಯಕ್ಕೆ ಮೂಲ ಕಾರಣ' ಎಂದು ಅವರು ತಿಳಿಸಿದರು.
'ರೆಡ್‌ಲೈಟ್ ಆನ್, ಗಾಡಿ ಆಫ್' ಅಭಿಯಾನದ ಮೂಲ ಉದ್ದೇಶವೇ ನಗರದಲ್ಲಿ ವಾಹನಗಳಿಂದ ಉಂಟಾಗುವ ಮಾಲಿನ್ಯ ತಡೆಯುವುದಾಗಿದೆ. ಹೀಗಾಗಿ ನಾವು ಈ ಅಭಿಯಾನವನ್ನು ಇಂದಿನಿಂದ ಇನ್ನೂ 15 ದಿನಗಳ ಕಾಲ ಅಂದರೆ, ಡಿ.3ರವರೆಗೆ ಮುಂದುವರಿಸುತ್ತೇವೆ' ಎಂದು ರೈ ಸುದ್ದಿಗಾರರಿಗೆ ತಿಳಿಸಿದರು.