HEALTH TIPS

ಆರ್ಥಿಕ ದುರ್ಬಲ ವರ್ಗಗಳಿಗೆ ಕೋಟಾ: ಮಾನದಂಡಗಳನ್ನು ಪುನರ್‌ಪರಿಶೀಲಿಸಲಿರುವ ಕೇಂದ್ರ

Top Post Ad

Click to join Samarasasudhi Official Whatsapp Group

Qries

               ನವದೆಹಲಿ :ವೈದ್ಯಕೀಯ ಶಿಕ್ಷಣದಲ್ಲಿ ಮೀಸಲಾತಿಗಾಗಿ ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯೂಎಸ್)ಗಳನ್ನು ಗುರುತಿಸಲು ಮಾನದಂಡಗಳನ್ನು ಪುನರ್‌ಪರಿಶೀಲಿಸಲಾಗುವುದು ಎಂದು ಕೇಂದ್ರವು ಗುರುವಾರ ಅಖಿಲ ಭಾರತ ಕೋಟಾದಲ್ಲಿ ಇಡಬ್ಲುಎಸ್ ಮೀಸಲಾತಿ ಅನುಷ್ಠಾನದ ತನ್ನ ನಿರ್ಧಾರವನ್ನು ಪ್ರಶ್ನಿಸಿರುವ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತು.

             ಇಡಬ್ಲ್ಯೂಎಸ್‌ಗಳಿಗೆ ಈಗಿನ ಆದಾಯ ಮಿತಿಯು ವಾರ್ಷಿಕ ಎಂಟು ಲ.ರೂ.ಗೂ ಕಡಿಮೆಯಿದ್ದು,ಇದನ್ನು ಪುನರ್‌ಪರಿಶೀಲಿಸಲು ನಾಲ್ಕು ವಾರಗಳ ಸಮಯಾವಕಾಶವನ್ನು ಕೇಂದ್ರವು ಕೋರಿದೆ. ಅಲ್ಲಿಯವರೆಗೆ ನೀಟ್‌ಗಾಗಿ ಕೌನ್ಸೆಲಿಂಗ್ ನಡೆಸಲಾಗುವುದಿಲ್ಲ ಎಂದು ಕೇಂದ್ರದ ಪರ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ಹೇಳಿದರು.

             ನ್ಯಾಯಾಲಯವು ಕೇಂದ್ರಕ್ಕೆ ಒಂದು ತಿಂಗಳ ಕಾಲಾವಕಾಶವನ್ನು ನೀಡಿದ್ದು,ಪ್ರಕರಣದ ಮುಂದಿನ ವಿಚಾರಣೆಯು ಜ.6ರಂದು ನಡೆಯಲಿದೆ.

            ಯಾವ ಆಧಾರದಲ್ಲಿ ಒಬಿಸಿಗಳಲ್ಲಿ ಕೆನೆಪದರವನ್ನು ನಿರ್ಧರಿಸುವ ವಾರ್ಷಿಕ ಎಂಟು ಲ.ರೂ.ಗೂ ಕಡಿಮೆ ಆದಾಯದ ಮಾನದಂಡವನ್ನೇ ಇಡಬ್ಲ್ಯೂಎಸ್‌ಗೆ ವಾರ್ಷಿಕ ಆದಾಯವನ್ನು ನಿಗದಿಗೊಳಿಸಲು ಬಳಸಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಇತ್ತೀಚಿಗೆ ಕೇಂದ್ರವನ್ನು ಪ್ರಶ್ನಿಸಿದ ಬಳಿಕ ಈ ವಿಷಯವನ್ನು ಪುನರ್‌ಪರಿಶೀಲಿಸುವ ಸರಕಾರದ ನಿರ್ಧಾರ ಹೊರಬಿದ್ದಿದೆ.

ಅ.21ರಂದು ನಡೆದಿದ್ದ ವಿಚಾರಣೆ ಸಂದರ್ಭದಲ್ಲಿ ಪ್ರಶ್ನೆಗಳನ್ನೆತ್ತಿದ್ದ ನ್ಯಾ.ಡಿ.ವೈ.ಚಂದ್ರಚೂಡ ನೇತೃತ್ವದ ಪೀಠವು ಒಂದು ಹಂತದಲ್ಲಿ ತಾನು ಇಡಬ್ಲ್ಯೂಎಸ್ ಅಧಿಸೂಚನೆಯನ್ನು ತಡೆಹಿಡಿಯುವುದಾಗಿ ಎಚ್ಚರಿಕೆಯನ್ನು ನೀಡಿತ್ತು.

              ಎಂಟು ಲ.ರೂ.ಗಳ ಆದಾಯ ಮಿತಿಯನ್ನು ಹೇರುವ ಮೂಲಕ ನೀವು ಸಮಾನರಲ್ಲದವರನ್ನು ಸಮಾನರಾಗಿಸುತ್ತಿದ್ದೀರಿ. ಒಬಿಸಿಗಳಲ್ಲಿ ಎಂಟು ಲ.ರೂ.ಗೂ ಕಡಿಮೆ ಆದಾಯ ಹೊಂದಿರುವ ಜನರು ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿವಿಕೆಯಿಂದ ನರಳುತ್ತಿದ್ದಾರೆ. ಸಾಂವಿಧಾನಿಕ ಯೋಜನೆಯಡಿ ಇಡಬ್ಲ್ಯೂಎಸ್‌ಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಲ್ಲ. ಇದೊಂದು ನೀತಿ ವಿಷಯವಾಗಿದೆ,ಆದರೆ ಅದರ ಸಾಂವಿಧಾನಿಕತೆಯನ್ನು ನಿರ್ಧರಿಸಲು ಕಾರಣಗಳನ್ನು ತಿಳಿದುಕೊಳ್ಳುವ ಹಕ್ಕು ನ್ಯಾಯಾಲಯಕ್ಕೆ ಇದೆ ಎಂದು ನ್ಯಾ.ಚಂದ್ರಚೂಡ ಹೇಳಿದ್ದರು.

          ದೇಶಾದ್ಯಂತ ಒಂದೇ ಆದಾಯ ಮಿತಿಯನ್ನು ನಿಗದಿಗೊಳಿಸಿದ್ದು ಹೇಗೆ ಎಂದೂ ನ್ಯಾಯಾಲಯವು ಕೇಂದ್ರವನ್ನು ಪ್ರಶ್ನಿಸಿತ್ತು.

           ರಾಜ್ಯಗಳ ತಲಾದಾಯವು ವಿಭಿನ್ನವಾಗಿದೆ ಮತ್ತು ಒಂದೇ ರೀತಿಯ ಮಾನದಂಡವನ್ನು ಬಳಸುವುದು ನ್ಯಾಯಸಮ್ಮತವಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.

               ಆದಾಗ್ಯೂ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಕೇಂದ್ರವು,ಆದಾಯ ನಿಗದಿ ನೀತಿಯು ತಾರ್ಕಿಕವಾಗಿದೆ ಮತ್ತು ಸಂವಿಧಾನದ 14,15 ಮತ್ತು 16ನೇ ವಿಧಿಗಳಿಗೆ ಅನುಗುಣವಾಗಿದೆ ಎಂದು ವಾದಿಸಿತ್ತು.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries