ಕರ್ನೂಲ್: ಪ್ರಾಥಮಿಕ ಶಾಲಾ ವಿದ್ಯಾರ್ಥಿಯೊಬ್ಬನ ಪೆನ್ಸಿಲ್ನನ್ನು ಆತನ ಸಹಪಾಠಿ ಕದ್ದೊಯ್ದಿದ್ದಾನೆ ಎಂದು ಆರೋಪಿಸಿ ವಿದ್ಯಾರ್ಥಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.
ವಿದ್ಯಾರ್ಥಿಯೊಬ್ಬ ಸಹಪಾಠಿ ವಿರುದ್ಧ ಪೆನ್ಸಿಲ್ ಕದ್ದ ಆರೋಪದ ಮೇಲೆ ದೂರು ದಾಖಲಿಸಲು ಮಕ್ಕಳ ಗುಂಪಿನೊಂದಿಗೆ ಠಾಣೆಗೆ ಬಂದಿದ್ದನ್ನು ನೋಡಿ ಪೊಲೀಸ್ ಅಧಿಕಾರಿಗಳು ಆಶ್ಚರ್ಯಚಕಿತರಾಗಿದ್ದಾರೆ.
ಫೆಬ್ರವರಿಯಲ್ಲಿ ಚಿತ್ರೀಕರಿಸಲಾದ ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೊದಲ ತರಗತಿ ವಿದ್ಯಾರ್ಥಿಯಾದ ಹನುಮಂತ ಕರ್ನೂಲ್‌ನ ಪೆದ್ದಕಬಾದೂರು ಪೊಲೀಸ್ ಠಾಣೆಯಲ್ಲಿ ಕಳ್ಳತನದ ಆರೋಪ ಹೊತ್ತಿರುವ ತನ್ನ ಸಹಪಾಠಿಯೊಂದಿಗೆ ದೂರು ನೀಡಲು ಬಂದಿದ್ದಾನೆ. ಅಲ್ಲದೇ ವಿದ್ಯಾರ್ಥಿ "ಪೆನ್ಸಿಲ್ ಸಮಸ್ಯೆಯನ್ನು" ಬಗೆಹರಿಸುವಂತೆ ಪೊಲೀಸರಲ್ಲಿ ಕೇಳಿಕೊಂಡಿದ್ದಾನೆ.
ಈ ವಿಡಿಯೋವನ್ನು ಆಂಧ್ರಪ್ರದೇಶ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ಪ್ರಾಥಮಿಕ ಶಾಲಾ ಮಕ್ಕಳೂ ಸಹ ಎಪಿ ಪೊಲೀಸರನ್ನು ನಂಬುತ್ತಾರೆ. ಆಂಧ್ರಪ್ರದೇಶದ ಜನರಿಗೆ ವಿಶ್ವಾಸ ಮತ್ತು ಭರವಸೆ ನೀಡುವ ರೀತಿಯಲ್ಲಿ ಆಂಧ್ರಪ್ರದೇಶ ಪೊಲೀಸರ ವರ್ತನೆ, ನಡವಳಿಕೆಯಲ್ಲಿ ಬದಲಾವಣೆಯಾಗಿದೆ" ಎಂದು ಪೊಲೀಸರು ಸರಣಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಒಬ್ಬ ಹುಡುಗ ತನ್ನ ಪೆನ್ಸಿಲ್ ತೆಗೆದುಕೊಂಡು ಅದನ್ನು ಹಿಂತಿರುಗಿಸಲಿಲ್ಲ ಎಂದು ದೂರು ನೀಡಲು ಬಂದ ವಿಡಿಯೋ ಇದಾಗಿದೆ. ಇದರ ಬಗ್ಗೆ ಪೊಲೀಸರು ಮಗುವನ್ನು ಏನು ಮಾಡಬೇಕು ಎಂದು ಕೇಳಿದಾಗ, ಸಹಪಾಟಿ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ವಿದ್ಯಾರ್ಥಿ ಹನುಮಂತ ಹೇಳುತ್ತಾನೆ. ಈ ಸಂದರ್ಭದಲ್ಲಿ ಆತನ ಕೆಲವು ಸ್ನೇಹಿತರು ಹಿಂದೆ ನಿಂತು ನಗುತ್ತಿದ್ದಾರೆ.
ಪೊಲೀಸರು ಇಬ್ಬರು ಮಕ್ಕಳೊಂದಿಗೆ ವಿವರವಾದ ಚರ್ಚೆಯಲ್ಲಿ ತೊಡಗಿದ್ದು, ರಾಜಿ ಮಾಡಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಪ್ರಕರಣವನ್ನು ದಾಖಲಿಸಿದರೆ ಸಹಪಾಠಿ ಜೈಲಿಗೆ ಹೋಗುತ್ತಾನೆ, ಜಾಮೀನು ಸಿಗುವುದಿಲ್ಲ. ಅಲ್ಲದೇ ಆತನ ತಂದೆ-ತಾಯಿಗೆ ನೋವಾಗುತ್ತದೆ ಎಂದು ಹೇಳುತ್ತಾರೆ.
ವಿಡಿಯೋದ ಕೊನೆಯಲ್ಲಿ, ಇಬ್ಬರು ಮಕ್ಕಳು ರಾಜಿ ಮಾಡಿಕೊಂಡು ಕೈಕುಲುಕುವುದನ್ನು ಮತ್ತು ನಗುತ್ತಿರುವುದನ್ನು ಕಾಣಬಹುದು. ಇನ್ಮುಂದೆ ಈ ರೀತಿಯಾಗಿ ನಡೆದುಕೊಳ್ಳದಂತೆ ಬುದ್ಧಿವಾದ ಹೇಳಿ ಪೊಲೀಸರು ಮನೆಗೆ ಕಳುಹಿಸಿದ್ದಾರೆ.