ಛತ್ತೀಸ್ಗಢ: ದೀಪಾವಳಿ ರಜೆ ವಿಚಾರವಾಗಿ ಇಬ್ಬರು ಯೋಧರ ನಡುವೆ ನಡೆದ ಕಿತ್ತಾಟ ಹಾಗೂ ಗುಂಡಿನ ಚಕಮಕಿಯಲ್ಲಿ ನಾಲ್ವರು ಯೋಧರು ಸಾವನ್ನಪ್ಪಿರುವ ಘಟನೆ ತೆಲಂಗಾಣ-ಛತ್ತೀಸ್‌ಗಢ ಗಡಿ ಭಾಗದಲ್ಲಿ ಸೋಮವಾರ ನಡೆದಿದೆ.
ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಲಿಂಗಂಪಲ್ಲಿ ಬೇಸ್ ಕ್ಯಾಂಪ್‌ನಲ್ಲಿ ದೀಪಾವಳಿ ರಜೆ ವಿಚಾರವಾಗಿ ಯೋಧರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ. ಬಳಿಕ ಜಗಳ ತಾರಕ್ಕೇರಿದ್ದು, ಪರಸ್ಪರ ಗನ್‌ಗಳಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ.
ಇವರಿಬ್ಬರ ಜೊತೆಗೆ ಮತ್ತಿಬ್ಬರು ಯೋಧರೂ ಕೂಡ ಘಟನೆಯಲ್ಲಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಬಿಹಾರದ ರಾಜಮಣಿ ಯಾದವ್, ದಾಂಜಿ ಮತ್ತು ಬಂಗಾಳದ ರಾಜುಮಂಡಲ್ ಎಂಬ ಸೈನಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಭದ್ರಾಚಲಂ ಏರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ವೇಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಧರ್ಮೇಂದರ್ ಎಂಬ ಯೋಧ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಚಿಕಿತ್ಸೆ ಪಡೆಯುತ್ತಿರುವ ಇತರೆ ಯೋಧರ ಸ್ಥಿತಿ ಕೂಡ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.