ಮಂಜೇಶ್ವರ: ಕೇರಳ ಸರ್ಕಾರದ ಆದೇಶದ ಮೇರೆಗೆ ಕೇರಳದ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕಾಸರಗೋಡು ಜಿಲ್ಲೆಯ ಪ್ರತಿಭಾವಂತ ಮಕ್ಕಳನ್ನೊಳಗೊಂಡ ತಂಡದ ಸ್ಮೃತಿ ಯಾತ್ರೆ ನವೆಂಬರ್ 27 ರಂದು ಮಂಜೇಶ್ವರ ಗೋವಿಂದ ಪೈಗಳ ಮನೆಯಿಂದ ಆರಂಭಿಸಿ ಕಾಸರಗೋಡಿನ ವಿವಿಧ ಸ್ವಾತಂತ್ರ್ಯ ಸ್ಮಾರಕ ಕೇಂದ್ರಗಳನ್ನು ಸಂದರ್ಶಿಸಿ ಅಲ್ಲಿನ ಚರಿತ್ರೆಯನ್ನು ತಿಳಿದು ನವೆಂಬರ್ 28ರಂದು ಕಯ್ಯೂರು ನಲ್ಲಿ ಸಮಾರೋಪಗೊಳ್ಳಲಿದೆ.
ಮಂಜೇಶ್ವರ ಗೋವಿಂದ ಪೈಗಳ ನಿವಾಸದಲ್ಲಿ 27 ರಂದು ಬೆಳಿಗ್ಗೆ 9 ಗಂಟೆಗೆ ಕಾಸರಗೋಡು ಸಂಸದ ರಾಜ್ ಮೋಹನ ಉಣ್ಣಿತ್ತಾನ್ ಉದ್ಘಾಟನೆ ಮಾಡಲಿರುವರು. ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್, ಮಂಜೇಶ್ವರ ಪಂಚಾಯತು ಅಧ್ಯಕ್ಷೆ ಜೀನ್ ಲವೀನ ಮೊಂತೇರೊ, ಪಂಚಾಯತು ಸದಸ್ಯೆ ಸುಪ್ರಿಯಾ ಶೆಣೈ ಭಾಗವಹಿಸಲಿರುವರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ. ವಿ ಸ್ವಾಗತಿಸಿ ಮಂಜೇಶ್ವರ ಗೋವಿಂದ ಪೈಗಳ ಕುರಿತು ಗೋವಿಂದ ಪೈ ಸ್ಮಾರಕ ಸಮಿತಿಯ ಕಾರ್ಯದರ್ಶಿ ಕೆ.ಆರ್ ಜಯಾನಂದ ಮಾಹಿತಿ ನೀಡಲಿರುವರು. ಸ್ಮೃತಿ ಯಾತ್ರೆಯು ಬಳಿಕ ಕಾರಡ್ಕ, ಉಬೈದ್ ಸ್ಮಾರಕ ತಳಂಗೆರೆ, ಬೇಕಲ ಕೋಟೆ, ವೆಳ್ಳಿಕೋತ್ ಸಂಚರಿಸಿ ಅಲ್ಲಿನ ಚರಿತ್ರೆಯನ್ನು ತಿಳಿದು ಮೊದಲ ದಿನದ ಯಾತ್ರೆ ಮುಕ್ತಾಯವಾಗಲಿದೆ. ಮರುದಿನ ಮಾಂದೋಪ್ ಮೈದಾನದಿಂದ ಆರಂಭಿಸಿ ಎ.ಸಿ ಕಣ್ಣನ್ ನಾಯರ್ ಸ್ಮಾರಕ, ಏಚಿಕ್ಕಾನ ತರವಾಡು, ನೀಲೇಶ್ವರ ರಾಜಾಸ್ ಶಾಲೆ, ಕುಟ್ಟಮತ್, ಪಿಲಿಕೋಡ್ ಭವನ ಸಂದರ್ಶನ ಮಾಡಿ ಕಯ್ಯೂರು ನಲ್ಲಿ ಸಮಾರೋಪಗೊಳ್ಳಲಿದೆ.
ಪ್ರತಿಯೊಂದು ಕೇಂದ್ರಗಳಲ್ಲೂ ಆಯಾ ಪ್ರದೇಶದ ಶಾಸಕರು, ಸ್ಥಳೀಯಾಡಳಿತ ಅಧ್ಯಕ್ಷರು ಪ್ರಾದೇಶಿಕ ಪಂಚಾಯತು ಸದಸ್ಯರು, ಶಿಕ್ಷಣ ಇಲಾಖೆಯ ಅಧಿಕೃತರು ಭಾಗವಹಿಸಲಿರುವರು. ಪ್ರತಿಯೊಂದು ಕೇಂದ್ರದಲ್ಲೂ ಆ ಪ್ರದೇಶದ ಚರಿತ್ರೆಯ ಬಗ್ಗೆ ಅನುಭವಿಗಳಿಂದ ಮಕ್ಕಳಿಗೆ ವಿಚಾರ ವಿನಿಮಯ ನಡೆಯಲಿದೆ.
ಮಂಜೇಶ್ವರ ಗೋವಿಂದ ಪೈಗಳ ನಿವಾಸದಲ್ಲಿ ಜರಗಿದ ಸಿದ್ಧತಾ ಸಭೆಯಲ್ಲಿ ಕೆ.ಆರ್ ಜಯಾನಂದ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಪಂಚಾಯಿತಿನ ಅಧ್ಯಕ್ಷೆ ಶ್ರೀಮತಿ ಜೀನ್ ಲವೀನ ಮೊಂತೇರೊ ಅಧ್ಯಕ್ಷರಾಗಿ ಸ್ವಾಗತ ಸಮಿತಿ ರಚಿಸಲಾಯಿತು. ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ. ವಿ. ಸ್ವಾಗತಿ, ವಂದಿಸಿದರು.