ಕೊಚ್ಚಿ: ಕೇರಳದಲ್ಲಿ ಟೊಮೇಟೊ ಬೆಲೆ ಏರಿಕೆಯಾಗುತ್ತಿದೆ. ಇತ್ತೀಚಿನ ವಾರಗಳಲ್ಲಿ ಏರಿಕೆ ಕಾಣುತ್ತಿದ್ದ ಬೆಲೆಗಳು ಈ ವಾರ 100ರ ಗಡಿ ದಾಟಿವೆ. ಟೊಮೇಟೊ ಬೆಳೆಯುವ ರಾಜ್ಯಗಳಲ್ಲಿ ನವೆಂಬರ್‍ನಲ್ಲಿ ಸುರಿದ ಅನಿರೀಕ್ಷಿತ ಮಳೆಯೇ ಟೊಮೆಟೊ ಬೆಲೆ ಏರಿಕೆಗೆ ಕಾರಣ ಎನ್ನುತ್ತಾರೆ ರೈತರು ಮತ್ತು ಮಾರಾಟಗಾರರು.
ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರಥಮ ದರ್ಜೆಯ ಟೊಮೇಟೊ 98-100 ರೂ.ತಲಪಿದೆ. ತಮಿಳುನಾಡು ಮತ್ತು ಕರ್ನಾಟಕ ಟೊಮೆಟೊ ಬೆಳೆಯುವ ಪ್ರಮುಖ ರಾಜ್ಯಗಳಾಗಿವೆ. ಮಳೆಯಿಂದಾಗಿ ಟೊಮೆಟೊ ಬೆಳೆ ಹಾನಿಯಾಗಿದೆ.
ಕೊಚ್ಚಿ, ತಿರುವನಂತಪುರ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಗ್ರಾಮಾಂತರ ಪ್ರದೇಶಗಳಲ್ಲಿ ಟೊಮೆಟೊ ಬೆಲೆ 100 ರೂ. ಆಗಿದೆ. ಭಾರೀ ಮಳೆಯಿಂದಾಗಿ ತರಕಾರಿ ಬೆಲೆ ದಿಢೀರ್ ಏರಿಕೆಯಾಗಿದೆ. ಕರ್ನಾಟಕದಲ್ಲಿ ಈ ಬಾರಿ ಉತ್ತಮ ಇಳುವರಿ ನಿರೀಕ್ಷೆಯಿದ್ದ ತುಮಕೂರು, ಚಿಕ್ಕಬಳ್ಳಾಪುರ ಮೊದಲಾದೆಡೆ ಭಾರಿ ಮಳೆಯಾಗಿದೆ. ಬೆಳೆ ನಾಶವಾಗಿ ರೈತರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿಯೂ ಭಾರೀ ಮಳೆಯಿಂದಾಗಿ ದೇಶೀಯ ಉತ್ಪಾದನೆಯಲ್ಲಿ ಕುಸಿತ ಕಂಡಿದೆ.
ದೊಡ್ಡ ಈರುಳ್ಳಿ ಬೆಲೆ ರೂ. 50 ದಾಟಿದೆ. ಮೂರು ತಿಂಗಳ ಹಿಂದೆ 26-30 ರೂ.ಗಳಿದ್ದ ದೊಡ್ಡ ಈರುಳ್ಳಿ ಈಗ ಚಿಲ್ಲರೆ ಮಾರುಕಟ್ಟೆಯಲ್ಲಿ 50-60 ರೂ. ಇದೆ. ಅಡುಗೆ ಎಣ್ಣೆಯ ಬೆಲೆ ಕೂಡ ಏರಿಕೆಯಾಗಿದೆ.