ನವದೆಹಲಿ: ರೈತರ ಆದಾಯವನ್ನು ದ್ವಿಗುಣಗೊಳಿಸುವ ಮತ್ತು 2022ರ ವೇಳೆಗೆ ಎಲ್ಲರಿಗೂ ವಸತಿ ಕಲ್ಪಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಕಾಂಕ್ಷೆಯುಳ್ಳ ಯೋಜನೆಯು ಸಂಸದೀಯ ಸಮಿತಿಯ ಪರಿಶೀಲನೆಗೆ ಒಳಪಡಲಿದೆ.
ಬಿಜೆಪಿಯ ಪಿ.ಸಿ. ಗದ್ದಿಗೌಡರ್ ಅಧ್ಯಕ್ಷತೆಯ ಸಂಸದೀಯ ಕೃಷಿ ಸ್ಥಾಯಿ ಸಮಿತಿಯು '2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ' ಮತ್ತು 'ಎಣ್ಣೆಕಾಳುಗಳು ಮತ್ತು ಬೇಳೆಕಾಳುಗಳ ಲಭ್ಯತೆ ' ಕುರಿತ ವಿಷಯವನ್ನು ಪರೀಕ್ಷೆಗಾಗಿ ಆಯ್ಕೆ ಮಾಡಿಕೊಂಡಿದೆ.
ಅಡುಗೆ ಪದಾರ್ಥಗಳಿಗೆ ಸಂಬಂಧಿಸಿದ ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಸಲುವಾಗಿ ಎಣ್ಣೆ ಕಾಳುಗಳು ಮತ್ತು ಬೇಳೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರವು ತೆಗೆದುಕೊಂಡ ಕ್ರಮಗಳನ್ನು ಈ ಸಮಿತಿಯು ಪರಿಶೀಲಿಸಲಿದೆ.
ಅಂತೆಯೇ ಬಿಜೆಪಿಯ ಜಗದಾಂಬಿಕಾ ಪಾಲ್ ಅವರ ಅಧ್ಯಕ್ಷತೆಯ ನಗರ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯನ್ನು (ನಗರ) ಪರಿಶೀಲನೆಗೆ ಆಯ್ಕೆಮಾಡಿಕೊಂಡಿದೆ.
2022ರ ವೇಳೆಗೆ ಸರ್ವರಿಗೂ ಸೂರು ಎಂಬುದು ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಆದರೆ, ಸರ್ಕಾರದ ಅಂಕಿ-ಅಂಶಗಳ ಪ್ರಕಾರ 2022ರ ವೇಳೆಗೆ ಫಲಾನುಭವಿಗಳಿಗೆ ಮತ್ತು ಅರ್ಹರಿಗೆ ವಿತರಿಸಲು ಯೋಜಿಸಿರುವ ಮನೆಗಳ ಪೈಕಿ ಶೇ 55ಕ್ಕಿಂತಲೂ ಹೆಚ್ಚಿನ ಮನೆಗಳನ್ನು ಇನ್ನೂ ನಿರ್ಮಿಸಲಾಗಿಲ್ಲ. ಇದುವರೆಗೆ ಫಲಾನುಭವಿಗಳಿಗೆ ಮಂಜೂರಾದ 114.06ಲಕ್ಷ ವಸತಿ ಗೃಹಗಳ ಪೈಕಿ 51.97ಲಕ್ಷ ಮನೆಗಳನ್ನು ಮಾತ್ರ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ.
2014ರ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಮೋದಿ ಅವರು, 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಮತದಾರರಿಗೆ ಭರವಸೆ ನೀಡಿದ್ದರು. ರೈತರು ತಮ್ಮ ಉತ್ಪನ್ನಗಳನ್ನು ಸುಲಭವಾಗಿ ಮಾರಾಟ ಮಾಡಲು ಮೂರು ಕೃಷಿ ಕಾನೂನುಗಳನ್ನು ಜಾರಿಗೆ ತಂದರು.
ಆದರೆ, ಕೃಷಿ ಮಸೂದೆಗಳಿಗೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ರೈತಪರ ಸಂಘಟನೆಗಳು 11 ತಿಂಗಳಿನಿಂದ ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿವೆ.