ನವದೆಹಲಿ: ಬಿಜೆಪಿಯ ಲೋಕಸಭಾ ಸಂಸದ ವರುಣ್ ಗಾಂಧಿ ಮತ್ತೆ ರೈತರ ಪರ ಧ್ವನಿ ಎತ್ತಿದ್ದಾರೆ.
ಸೋಮವಾರ ಅವರು ಲಖಿಂಪುರ ಮತ್ತು ಪಿಲಿಭಿತ್ ಗಡಿಭಾಗದ ರೈತರೊಂದಿಗೆ ಅವರ ಸಮಸ್ಯೆಗಳ ಕುರಿತು ಚರ್ಚಿಸಿದರು.
ಈ ಕುರಿತು ಮಾತನಾಡಿದ ಅವರು, ರೈತರ ನೋವಿಗೆ ಕಿವಿಗೊಡಬೇಕು. ರೈತರ ಕಷ್ಟ ತಿಳಿಯಲು ಮೊದಲು ಅವರ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಕನಿಷ್ಠ ಬೆಂಬಲ ಬೆಲೆ ಸಿಗಲಿದೆ ಎಂಬುದಕ್ಕೆ ಕಾನೂನು ರಕ್ಷಣೆ ಬೇಕಾಗಿದೆ.
ಇದರಿಂದ ಮಾತ್ರವೇ ಸಗಟು ಮಾರುಕಟ್ಟೆಯಲ್ಲಿ ರೈತರ ಶೋಷಣೆ ತಪ್ಪಲಿದೆ ಎಂದು ಹೇಳಿದರು. ಕಳೆದ ಕೆಲವು ದಿನಗಳಿಂದ ವರುಣಗಾಂಧಿ ಸತತವಾಗಿ ರೈತರ ಬೇಡಿಕೆಗಳಿಗೆ ಬೆಂಬಲ ನೀಡುತ್ತಿದ್ದಾರೆ.
ಇದಕ್ಕೂ ಮುನ್ನ ಅಕ್ಟೋಬರ್ 29ರಂದು ಮಂಡಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದರು. ಪಿಲಿಭಿತ್ ಸೇರಿದಂತೆ 17 ಜಿಲ್ಲೆಗಳಲ್ಲಿ ರೈತ ತನ್ನ ಭತ್ತದ ಬೆಳೆಗೆ ತಾನೇ ಬೆಂಕಿ ಹಚ್ಚುತ್ತಿದ್ದಾನೆ ಎಂದು ಮಂಡಿ ನೌಕರರಿಗೆ ಹೇಳಿದ್ದರು. ಇದು ಇಡೀ ರಾಜ್ಯಕ್ಕೆ ದೊಡ್ಡ ಅವಮಾನ ಎಂದು ಅವರು ಹೇಳಿದ್ದರು.