ಬದಿಯಡ್ಕ: ಗ್ರಾಮ ಕಚೇರಿಗಳಲ್ಲಿ ಬಾಕಿ ಇರುವ ಕಡತಗಳನ್ನು ಡಿಸೆಂಬರ್ ವೇಳೆಗೆ ಗ್ರಾಮ ಮಟ್ಟದ ನ್ಯಾಯಾಲಯದ ಮೂಲಕ ಇತ್ಯರ್ಥಪಡಿಸಲಾಗುವುದು ಎಂದು ಕಂದಾಯ ಮತ್ತು ವಸತಿ ಸಚಿವ ಕೆ.ರಾಜನ್ ತಿಳಿಸಿದರು.
ಕುಂಬ್ಡಾಜೆ ಸ್ಮಾರ್ಟ್ ವಿಲೇಜ್ ಕಚೇರಿಯನ್ನು ಸಚಿವರು ಗುರುವಾರ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸೆಕ್ರೆಟರಿಯೇಟ್‍ನಿಂದ ಆರಂಭವಾದ ಅದಾಲತ್‍ಗಳು ಹಳ್ಳಿಗಳನ್ನು ತಲುಪುತ್ತಿವೆ. ಅದಾಲತ್ ಗಳು ಗ್ರಾಮಗಳ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿರದೆ ರಾಜ್ಯದ ಎಲ್ಲಾ 1666 ಗ್ರಾಮಗಳಲ್ಲಿ ಅದಾಲತ್‍ಗಳನ್ನು ಪ್ರತಿ ಜಿಲ್ಲಾಧಿಕಾರಿಗೆ ಹತ್ತು ಗ್ರಾಮ ಕಚೇರಿಗಳೊಂದಿಗೆ ಆಯೋಜಿಸಲಾಗುವುದು ಎಂದು ಸಚಿವರು ಹೇಳಿದರು.
ಕೇರಳದ ಎಲ್ಲಾ ಭೂ ರಹಿತರ ಸಮಸ್ಯೆಗಳನ್ನು ಪರಿಹರಿಸುವ ಕಂದಾಯ ಭೂದಾಖಲೆ ಡ್ಯಾಶ್‍ಬೋರ್ಡ್ ನ್ನು ಡಿಸೆಂಬರ್‍ನಲ್ಲಿ ಪ್ರಾರಂಭಿಸಲಾಗುವುದು ಮತ್ತು ಜನವರಿಯಲ್ಲಿ ಸಾರ್ವಜನಿಕರ ಅನುಕೂಲಕ್ಕೆ ವ್ಯವಸ್ಥೆಗೊಳಿಸಲಾಗುವುದು ಎಂದು ಸಚಿವರು ಹೇಳಿದರು. ರಾಜ್ಯದಲ್ಲಿ ಬಹುಕಾಲದಿಂದ ಜಮೀನಿನ ಅವಶ್ಯಕತೆ ಇದ್ದವರು, ತಿಳುವಳಿಕೆ ಕೊರತೆಯಿಂದ ಭೂಮಿ ಕೇಳದ ಭೂರಹಿತರು ಮೊದಲಾದವರಿಗೆ ಭೂಮಿ ನೀಡಲು ಅಡ್ಡಿ ಪಡಿಸಿದ್ದು ಏಕೆ ಎಂಬ ಮಾಹಿತಿಯನ್ನು ಡ್ಯಾಶ್‍ಬೋರ್ಡ್ ಉಲ್ಲೇಖಿಸಲಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಗ್ರಾಮ ಮಟ್ಟದ ಕಂದಾಯ ಅಧಿಕಾರಿಗಳೊಂದಿಗೆ ನಿರಂತರ ಸಂವಹನ ನಡೆಸುವ ಮೂಲಕ ರಚಿಸಲಾದ ಡ್ಯಾಶ್‍ಬೋರ್ಡ್ ಮೂಲಕ ಕಡಿಮೆ ಅವಧಿಯಲ್ಲಿ ಗರಿಷ್ಠ ಜನರನ್ನು ಭೂಮಿಯ ವಾರಸುದಾರರನ್ನಾಗಿ ಮಾಡುವ ಗಮನಾರ್ಹ ಪ್ರಯತ್ನವನ್ನು ಸರ್ಕಾರ ನಡೆಸುತ್ತಿದೆ ಎಂದು ಸಚಿವರು ಹೇಳಿದರು.
ಸಾರ್ವಜನಿಕರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ವಿವಿಧ ಪ್ರಮಾಣ ಪತ್ರಗಳಿಗಾಗಿ ಅವಲಂಬಿಸಬೇಕಾದ ಕಚೇರಿಯೇ ಗ್ರಾಮ ಕಚೇರಿಗಳು. ಆದ್ದರಿಂದ, ಸಾರ್ವಜನಿಕರು ಮತ್ತು ನೌಕರರಿಗೆ ಸಮಾನವಾಗಿ ಬಳಸಲು ಸ್ಮಾರ್ಟ್ ವಿಲೇಜ್ ಕಚೇರಿಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಸ್ಮಾರ್ಟ್ ವಿಲೇಜ್ ಕಛೇರಿಗಳು ಕಟ್ಟಡದ ಸೌಂದರ್ಯದಲ್ಲಿ ಮಾತ್ರ ಸ್ಮಾರ್ಟ್ ಆಗದೆ, ಹೆಸರಿಗೆ ತಕ್ಕಂತೆ ವೇಗವಾಗಿ, ಆಧುನಿಕವಾಗಿ, ವಿಶ್ವಾಸಾರ್ಹವಾಗಿ, ಜವಾಬ್ದಾರಿಯುತವಾಗಿ ಮತ್ತು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎನ್.ಎ.ನೆಲ್ಲಿಕುನ್ನು ವಹಿಸಿದ್ದರು. ಕಾರಡ್ಕ ಬ್ಲಾಕ್ ಪಂಚಾಯತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ, ಕುಂಬ್ಡಾಜೆ ಪಂಚಾಯತಿ ಅಧ್ಯಕ್ಷ ಹಮೀದ್ ಪೊಸಳಿಗೆ, ಜಿಲ್ಲಾ ಪಂಚಾಯತಿ ಸದಸ್ಯೆ ಬಿ.ಶೈಲಜಾ ಭಟ್, ಕಾರಡ್ಕ ಬ್ಲಾಕ್ ಪಂಚಾಯತಿ ಸದಸ್ಯೆ ಕೆ.ನಳಿನಿ, ಕುಂಬ್ಡಾಜೆ ಪಂಚಾಯತಿ ಸದಸ್ಯ ಹರೀಶ್ ಗೋಸಾಡ, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಟಿ.ಎನ್.ನಂಬಿಯಾರ್, ಕೆ.ವಾರಿಜಾಕ್ಷನ್, ಪ್ರಕಾಶ್ ಕುಂಬ್ರ, ಎ.ಟಿ.ಅಬೂಬಕರ್, ಅಬ್ದುಲ್ ರಹಮಾನ್ ಬಾಂಗೋಡ್, ದಾಮೋದರನ್ ಬೆಳ್ಳಿಗೆ, ಮ್ಯಾಥ್ಯೂ ಲಿಲಾಂಕಟ್ಟೆ, ಮುಹಮ್ಮದ್ ಸಾಲಿ, ಕುಟ್ಟಿಯಾನಂ ಮುಹಮ್ಮದ್ ಕುಂಞÂ್ಞ, ಎಂ.ಅನಂತನ್ ನಂಬಿಯಾರ್, ಸನ್ನಿ ಅರಮನೆ, ನ್ಯಾಷನಲ್ ಅಬ್ದುಲ್ಲ ಮಾತನಾಡಿದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಸ್ವಾಗತಿಸಿ, ಆರ್ ಡಿಒ ಅತುಲ್ ಎಸ್ ನಾಥ್ ವಂದಿಸಿದರು.