ಇರಿಂಞಾಲಕುಡ: ನಕಲಿ ಮದ್ಯ ಸೇವಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ತ್ರಿಶೂರಿನ ಇರಿಂಞಾಲಕುಡದಲ್ಲಿ ನಡೆದಿದೆ. ಮೃತರನ್ನು ಕನ್ನಂಪಳ್ಳಿ ಮನೆಯ ಶಂಕರನ್ ಎಂಬವರ ಪುತ್ರ ಬಿಜು (42) ಮತ್ತು ಜೋಸ್ ಅವರ ಪುತ್ರ ನಿಶಾಂತ್ (43) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ನಿಶಾಂತ್ ಮೃತಪಟ್ಟಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿ ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಜು ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ. ಅವರು ಸೇವಿಸಿದ ಮದ್ಯದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಚಂದಕ್ಕುನ್ನು ಬಸ್ ನಿಲ್ದಾಣದ ಬಳಿ ನಿಶಾಂತ್ ಚಿಕನ್ ಸೆಂಟರ್ ನಡೆಸುತ್ತಿದ್ದಾರೆ. ನಿನ್ನೆ ಸಂಜೆ ಇಬ್ಬರು ನಿಶಾಂತ್ ಅಂಗಡಿಯಲ್ಲಿ ಮದ್ಯ ಸೇವಿಸಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ನಿಶಾಂತ್ ನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಬಿಜು ಅವರನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿಶಾಂತ್ ಅವರ ಕೋಳಿ ಅಂಗಡಿ ಬಳಿ ಬಿಳಿ ದ್ರವ ಮತ್ತು ಲೋಟಗಳು ಪೊಲೀಸರಿಗೆ ಸಿಕ್ಕಿವೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.