ಕಾಸರಗೋಡು: ಕೇಂದ್ರ ಹಾಗೂ ಇತರ ರಾಜ್ಯಗಳಲ್ಲಿ ಇಂಧನ ಬೆಲೆ ಕಡಿತಗೊಳಿಸಿದರೂ, ಕೇರಳದಲ್ಲಿ ದರ ಕಡಿತಮಾಡದೆ, ಜನರನ್ನು ವಂಚಿಸುವ ಕೆಲಸವನ್ನು ರಾಜ್ಯ ಸರ್ಕಾರ ನಡೆಸುತ್ತಿರುವುದಾಗಿ ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ನ್ಯಾಯವಾದಿ ಪ್ರಕಾಶ್‍ಬಾಬು ತಿಳಿಸಿದ್ದಾರೆ.
ಅವರು ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿದ್ದರೂ, ಕೇರಳ ಸರ್ಕಾರ ತೆರಿಗೆ ಕಡಿತಗೊಳಿಸದ ಕ್ರಮ ಖಂಡಿಸಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದರು.
ಇಂಧನ ಬೆಲೆಯೇರಿಕೆ ವಿಷಯದಲ್ಲಿ ಎಡರಂಗ ಬೆಂಬಲಿತ ಸಂಘಟನೆಗಳು ಸರ್ಕಾರಿ ಕಚೇರಿಗಳ ಎದುರು ನಡೆಸುತ್ತಿರುವ ಪ್ರತಿಭಟನೆಯನ್ನು ಇನ್ನುಮುಂದೆ ಸಿಪಿಎಂ ಕಚೇರಿಗಳ ಎದುರು ನಡೆಸಲು ಮುಂದಾಗಬೇಕು. ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸಂಕಷ್ಟ ಎದುರಿಸುತ್ತಿದ್ದ ಸಂದರ್ಭ ಕೇಂದ್ರ ಸರ್ಕಾರ ರಾಜ್ಯಕ್ಕೆ ಎಲ್ಲ ರೀತಿಯ ನೆರವನ್ನೂ ನೀಡುತ್ತಾ ಬಂದಿದೆ. ಸರ್ಕಾರ ತೆರಿಗೆ ಕಡಿತಕ್ಕೆ ಮುಂದಾಗದಿದ್ದಲ್ಲಿ ಬಿಜೆಪಿ ರಾಜ್ಯವ್ಯಾಪಕವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಿರುವುದಾಗಿ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಶ್ರೀಕಾಂತ್, ರಾಮಪ್ಪ ಮಂಜೇಶ್ವರ, ಪುಷ್ಪಾ ಅಮೆಕ್ಕಳ, ಎನ್. ಸತೀಶ್, ಮನುಲಾಲ್ ಮೇಲತ್, ಜಿ.ಚಂದ್ರನ್, ಕೋಳಾರು ಸತೀಶ್ಚಂದ್ರ ಭಂಡಾರಿ, ಪಿ.ರಮೇಶ್, ಎ.ಕೆ ಕಯ್ಯಾರ್ ಮುಂತಾದವರು ಉಪಸ್ಥಿತರಿದ್ದರು.