ಸ್ಯಾನ್ ಫ್ರಾನ್ಸಿಸ್ಕೋ: ಜನಪ್ರಿಯ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ತನ್ನ ಜನಪ್ರಿಯವಾದ ಫೇಸ್ ರೆಕಗ್ನಿಷನ್ ವ್ಯವಸ್ಥೆಯನ್ನು ರದ್ದು ಮಾಡುವುದಾಗಿ ಘೋಷಣೆ ಮಾಡಿದೆ. ಜನರ ಖಾಸಗಿತನದ ಬಗ್ಗೆ ತೀವ್ರ ಕಳವಳ ವ್ಯಕ್ತವಾದ ಹಿನ್ನೆಲೆಯಲ್ಲಿ ಫೇಸ್‌ಬುಕ್ ತನ್ನ ಫೇಸ್ ರೆಕಗ್ನಿಷನ್ ವ್ಯವಸ್ಥೆಯನ್ನು ಸ್ಥಗಿತ ಮಾಡಲು ಮುಂದಾಗಿದೆ. ಹಾಗೆಯೇ ಕೋಟ್ಯಾಂತರ ಫೋಟೋ, ವಿಡಿಯೋಗಳ ಟೆಂಪ್ಲೇಟ್‌ಗಳನ್ನು ಡಿಲೀಟ್ ಮಾಡುವುದಾಗಿ ಹೇಳಿದೆ.
ಖ್ಯಾತ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಈ ಬಗ್ಗೆ ಹೇಳಿಕೆಯನ್ನು ನೀಡಿದೆ. ವರದಿಗಾರರು, ಶಾಸಕರು ಹಾಗೂ ಹಲವಾರು ಮಂದಿಯ ಆಂತರಿಕ ದಾಖಲೆಗಳು ಸೊರಿಕೆ ಆಗುತ್ತದೆ ಎಂಬ ಆಕ್ರೋಶದ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಫೇಸ್‌ಬುಕ್ ತನ್ನ ಫೇಸ್ ರೆಕಗ್ನಿಷನ್ ವ್ಯವಸ್ಥೆಯನ್ನು ಸ್ಥಗಿತ ಮಾಡುವುದಾಗಿ ತಿಳಿಸಿದೆ.
ಇನ್ನು ಮುಂದೆ ಫೇಸ್‌ಬುಕ್‌ನ ಜನಪ್ರಿಯ ಸೇವೆಗಳಲ್ಲಿ ಒಂದಾಗಿದ್ದ ಸ್ವಯಂ ಚಾಲಿತ ಮುಖ ಗುರುತಿಸುವಿಕೆ ವ್ಯವಸ್ಥೆ ಶೀಘ್ರದಲ್ಲೇ ಸ್ಥಗಿತಗೊಳ್ಳಲ್ಲಿದೆ. ಈ ಸೇವೆಯ ಮೂಲಕ ಫೋಟೋಗಳು ಮತ್ತು ವಿಡಿಯೋಗಳಲ್ಲಿ ಬಳಕೆದಾರರನ್ನು ಸ್ವಯಂಚಾಲಿತವಾಗಿ ಗುರುತಿಸಬಹುದಾಗಿತ್ತು. ಆದರೆ ಇನ್ನು ಮುಂದೆ ಹಾಗೆ ನೋಡಲು ಸಾಧ್ಯವಾಗುವುದಿಲ್ಲ.
ಫೋಟೋಗಳು ಮತ್ತು ವಿಡಿಯೋಗಳಲ್ಲಿ ಬಳಕೆದಾರರನ್ನು ಸ್ವಯಂಚಾಲಿತವಾಗಿ ಗುರುತಿಸಬಹುದಾದ ಕಾರಣದಿಂದಾಗಿ ಈ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿತ್ತು, ಈ ವಿಚಾರದಲ್ಲಿ ಹಲವಾರು ಆರೋಪಗಳು ಕೇಳಿ ಬರುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಫೇಸ್‌ಬುಕ್‌ನಲ್ಲಿ ಈ ವ್ಯವಸ್ಥೆಯ ದುರ್ಬಳಕೆಯ ಬಗ್ಗೆ ಆತಂಕ ವ್ಯಕ್ತವಾಗಿತ್ತು. ಈ ಎಲ್ಲಾ ಬೆಳವಣಿಗೆಯ ನಂತರ ಈ ವ್ಯವಸ್ಥೆಯನ್ನೇ ಸ್ಥಗಿತ ಮಾಡಲಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಮಾತೃ ಸಂಸ್ಥೆ ಮೆಟಾ, "ಫೇಸ್ ರೆಕಗ್ನಿಷನ್ ವ್ಯವಸ್ಥೆಯು ಸಮಾಜದಲ್ಲಿ ಭಾರೀ ಆತಂಕವನ್ನು, ಕಾಳಜಿಯನ್ನು ಸೃಷ್ಟಿ ಮಾಡಿದೆ. ಆದ್ದರಿಂದ ಈ ತಂತ್ರಜ್ಞಾನವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡಲಾಗುತ್ತದೆ. ಪ್ರಸ್ತುತ ನಡೆಯುತ್ತಿರುವ ಈ ಗೊಂದಲದ ನಡುವೆ ನಾವು ಫೇಸ್ ರೆಕಗ್ನಿಷನ್ ವ್ಯವಸ್ಥೆಯನ್ನು ಕೆಲವು ಕಡೆ ಮಾತ್ರ ಬಳಕೆ ಮಾಡಲು ಸಾಧ್ಯವಾಗುವಂತೆ ಸೀಮಿತ ಮಾಡುವುದು ಸೂಕ್ತ ಎಂದು ಅಭಿಪ್ರಾಯಿಸಿದ್ದೇವೆ," ಎಂದು ತಿಳಿಸಿದೆ.
ಎಂದಿನಿಂದ ಜಾರಿ ಎಂಬ ಮಾಹಿತಿ ನೀಡದ ಸಂಸ್ಥೆ: ಈ ನಡುವೆ ಈ ಬದಲಾವಣೆಯು ಯಾವ ದಿನದಿಂದ ಜಾರಿಗೆ ಬರಲಿದೆ ಎಂಬ ಬಗ್ಗೆ ಫೇಸ್‌ಬುಕ್ ಮಾಹಿತಿಯನ್ನು ನೀಡಿಲ್ಲ. ಈ ವ್ಯವಸ್ಥೆಯನ್ನು ಸ್ಥಗಿತಗೊಳಿಸುವುದು ಕೋಟ್ಯಾಂತರ ಮಂದಿಯ ಟೆಂಪ್ಲೇಟ್‌ಗಳನ್ನು ಅಳಿಸ ಬೇಕಾಗುತ್ತದೆ ಎಂದು ಕೂಡಾ ಈ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ವಿಚಾರದ ಬಗ್ಗೆ ತಮ್ಮ ಬ್ಲಾಗ್‌ನಲ್ಲಿ ಫೇಸ್‌ಬುಕ್‌ನ ಕೃತಕ ಬುದ್ಧಿಮತ್ತೆಯ ಉಪಾಧ್ಯಕ್ಷ ಜೆರೋಮ್ ಪೆಸೆಂಟಿ ಕೂಡಾ ಮಾಹಿತಿ ನೀಡಿದ್ದಾರೆ. "ನಿಯಂತ್ರಕರು ಈ ವ್ಯವಸ್ಥೆಯನ್ನು ಸ್ಥಗಿತ ಮಾಡುವ ಹಾಗೂ ಇದರ ನಿಯಮಗಳನ್ನು ಒದಗಿಸುವ ಪ್ರಕ್ರಿಯೆಯಲ್ಲಿದ್ದಾರೆ. ನಡೆಯುತ್ತಿರುವ ಅನಿಶ್ಮಿತತೆಯ ಮಧ್ಯೆ, ಈ ಮುಖ ಗುರುತಿಸುವಿಕೆಯ ಬಳಕೆಯನ್ನು ಕಿರಿದಾದ ಬಳಕೆಯ ಪ್ರಕರಣಗಳಿಗೆ ಸೀಮಿತಗೊಳಿಸುವುದು ಸೂಕ್ತವಾಗಿದೆ ಎಂದು ನಾವು ನಂಬುತ್ತೇವೆ," ಎಂದು ಹೇಳಿದ್ದಾರೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಪ್ರಪಂಚದಾದ್ಯಂತ ಶತಕೋಟಿ ಜನರು ಬಳಸುತ್ತಿದ್ದಾರೆ. ಈ ಆಪ್‌ಗಳನ್ನು ಬಳಕೆ ಮಾಡಲು ಜನರನ್ನು ಆಕರ್ಷಿಸುವ ಭಾಗವಾಗಿ ಫೇಸ್‌ಬುಕ್ ಈ ಹಿಂದೆ ಈ ಫೇಸ್ ರೆಕಗ್ನಿಷನ್ ವ್ಯವಸ್ಥೆಯನ್ನು ಆರಂಭ ಮಾಡಿತ್ತು. ಇನ್ನು ಇತ್ತೀಚೆಗೆ ಕ್ಲಬ್ ಹೌಸ್ ಅನ್ನು ಅಧಿಕ ಮಂದಿ ಬಳಕೆ ಮಾಡಲು ಆರಂಭ ಮಾಡಿದ್ಧಾರೆ, ಈ ಬೆನ್ನಲ್ಲೇ ಅದಕ್ಕೆ ಸ್ಪರ್ಧೆ ನೀಡಲು ಫೇಸ್‌ಬುಕ್ ಲೀವ್ ಆಡಿಯೋ ಹೊರತಂದಿದೆ. ಈ ಅಪ್ಲಿಕೇಷನ್ ಜನಪ್ರಿಯತೆಯನ್ನು ಕಂಡು ದಂಗಾಗಿರುವ ಸೋಷಿಯಲ್ ಮೀಡಿಯಾ ದೈತ್ಯ ಕಂಪನಿಗಳು ಇಂಥದ್ದೇ ಅಪ್ಲಿಕೇಷನ್ ಪರಿಚಯಿಸಲು ಮುಂದಾಗಿವೆ. ಫೇಸ್‌ಬುಕ್, ಟ್ವಿಟ್ಟರ್, ಡಿಸ್ಕಾರ್ಡ್, ರೆಡಿಟ್, ಸ್ಲ್ಯಾಕ್ ನಂಥ ಆಪ್‌ಗಳು ಧ್ವನಿಯಾಧಾರಿತ ಸೇವೆ ನೀಡಲು ಯೋಜಿಸುತ್ತಿವೆ.