ತಿರುವನಂತಪುರ: ಇಂಧನ ತೆರಿಗೆಯನ್ನು ಕಡಿಮೆ ಮಾಡದೆ ಜನರಿಂದ ಗರಿಷ್ಠ ಹಣ ಕೀಳಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಹಿನ್ನಡೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಹಿಂಪಡೆದ ನಂತರ ವಿವಿಧ ರಾಜ್ಯಗಳು ಇಂಧನ ಬೆಲೆಗಳ ಮೇಲಿನ ವ್ಯಾಟ್ ನ್ನು ಕಡಿಮೆ ಮಾಡಿವೆ. ಆದರೆ ತೆರಿಗೆ ಇಳಿಸಲು ಕೇರಳ ಮುಂದಾಗುತ್ತಿಲ್ಲ. ಈ ನಿರ್ಧಾರ ಇದೀಗ ಕೇರಳಕ್ಕೆ ಹೊಡೆತ ನೀಡಿದೆ.
ನೆರೆಯ ರಾಜ್ಯಗಳಿಗಿಂತ ಕೇರಳದಲ್ಲಿ ಈಗ ಇಂಧನ ಬೆಲೆ ಹೆಚ್ಚಾಗಿದೆ. ಇದರಿಂದಾಗಿ ಕೇರಳದಿಂದ ದೊಡ್ಡ ಮತ್ತು ದೂರದ ವಾಹನಗಳಿಗೆ ಇಂಧನ ತುಂಬಿಸುವುದು ಭಾರೀ ನಷ್ಟವಾಗುತ್ತಿದೆ. ಇದರೊಂದಿಗೆ ಇಂತಹ ವಾಹನಗಳು ಕೇರಳದಿಂದ ಇಂಧನ ತುಂಬಿಸಿಕೊಳ್ಳುವುದನ್ನು ನಿಲ್ಲಿಸಿವೆ ಎಂದು ಪಂಪ್ ಮಾಲೀಕರು ತಿಳಿಸಿದ್ದಾರೆ. ಇದಲ್ಲದೆ, ನೆರೆಯ ರಾಜ್ಯಗಳ ಪಂಪ್ ಗಳ ಮೂಲಕ ಗಡಿ ಜಿಲ್ಲೆಗಳ ಜನರು ಇಂಧನ ತುಂಬಿಸಿಕೊಳ್ಳುತ್ತಿರುವುದು ಕಂಡುಬಂದಿದೆ.ಇವೆಲ್ಲ ಕೇರಳಕ್ಕೆ ದೊಡ್ಡ ಹೊಡೆತ ನೀಡಲಿದೆ.
ಈ ಬೆಲೆ ವ್ಯತ್ಯಾಸ ಮುಂದುವರಿದರೆ ಭವಿಷ್ಯದಲ್ಲಿ ಕೇರಳಕ್ಕೆ ನೆರೆಯ ರಾಜ್ಯಗಳಿಂದ ಅಕ್ರಮ ದಾರಿಗಳ ಮೂಲಕ ಕಾಳಸಂತೆಯಲ್ಲಿ ಇಂಧನ ಸಾಗಣೆ ವಿಸ್ತರಣೆಯಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರದ ನಂತರ ಬಿಜೆಪಿ ಆಡಳಿತದ ಪುದುಚೇರಿಯಲ್ಲಿ ವ್ಯಾಟ್ ಕಡಿತದೊಂದಿಗೆ, ಮಯ್ಯಳಿಯಲ್ಲಿ ಇಂಧನ ಬೆಲೆ ನಿನ್ನೆ ತೀವ್ರವಾಗಿ ಕುಸಿದಿದೆ. ಇದರಿಂದಾಗಿ ಕೋಝಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಿಂದ ಮಯ್ಯಳಿಗೆ ವಾಹನಗಳ ಹರಿವು ಹೆಚ್ಚುತ್ತಿದೆ. ಕಣ್ಣೂರಿನಿಂದ ಕೋಝಿಕ್ಕೋಡ್‌ಗೆ ಸಂಚರಿಸುವ ಖಾಸಗಿ ಬಸ್‌ಗಳು ಮತ್ತು ದೊಡ್ಡ ವಾಹನಗಳು ಮಾಹೆಯಿಂದ ಇಂಧನ ತುಂಬಿಸಿಕೊಳ್ಳುತ್ತವೆ.
ಮಾಹೆಯಲ್ಲಿ ನಿನ್ನೆ ಪೆಟ್ರೋಲ್ ದರ 92.52 ರೂ., ಡೀಸೆಲ್ ದರ 80.94 ರೂ. ಮಾಹೆಗೆ ಸಮೀಪವಿರುವ ತಲಶ್ಶೇರಿಯಲ್ಲಿ ಈಗಲೂ ಪೆಟ್ರೋಲ್ ಬೆಲೆ 104.96 ರೂ. ಇದೆ. ತಲಶ್ಶೇರಿ ಮತ್ತು ಮಾಹೆಯಲ್ಲಿನ ಬೆಲೆಯನ್ನು ಹೋಲಿಸಿದರೆ ಪೆಟ್ರೋಲ್‌ಗೆ 12 ರೂ. ಮತ್ತು ಡೀಸೆಲ್‌ಗೆ 13 ರೂ.ಗಳ ವ್ಯತ್ಯಾಸವಿದೆ. ಕೇರಳದಲ್ಲಿ ಬೆಲೆ ಇಳಿಕೆಯಾಗದ ಕಾರಣ ತಲಶ್ಶೇರಿ ಮತ್ತು ವಡಗರದ ಜನರು ಮಾಹೆಯ ಪೆಟ್ರೋಲ್ ಪಂಪ್‌ಗಳನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ.
ಪುದುಚೇರಿಯ ಹೊರತಾಗಿ ಕರ್ನಾಟಕವೂ ರಾಜ್ಯದ ತೆರಿಗೆಯನ್ನು ಕಡಿಮೆ ಮಾಡಿದೆ. ಕರ್ನಾಟಕವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ನ್ನು ಲೀಟರ್‌ಗೆ 7 ರೂ.ಕಡಿತ ಮಾಡಿದೆ. ಅದರೊಂದಿಗೆ ಕರ್ನಾಟಕಕ್ಕೂ ಕೇರಳಕ್ಕೂ ದೊಡ್ಡ ವ್ಯತ್ಯಾಸವಿದೆ. ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಕಾಸರಗೋಡು, ವಯನಾಡು, ಕಣ್ಣೂರು ಮತ್ತಿತರ ಜಿಲ್ಲೆಗಳ ಜನರು ಗಡಿ ದಾಟುತ್ತಿದ್ದಾರೆ. ಮಂಜೇಶ್ವರ ಸನಿಹದ ತಲಪಾಡಿ, ಬಾಯಾರು ಸಮೀಪದ ಕನ್ಯಾನ, ಪೆರ್ಲ ಸಮೀದ ಅಡ್ಯನಡ್ಕ, ದೇಲಂಪಾಡಿ ಸನಿಹದ ಜಾಲ್ಸೂರು ಮೊದಲಾದೆಡೆಗಳಿಗೆ ವಾಹನಗಳು ದೌಡಾಯಿಸುತ್ತಿವೆ.