ನವದೆಹಲಿ: ಬೆಳೆಗಳಿಗೆ ನೀಡುವ ಕನಿಷ್ಠ ಬೆಂಬಲ ಬೆಲೆಯ ಖಾತ್ರಿಯನ್ನು ಶಾಸನಬದ್ಧಗೊಳಿಸಬೇಕು ಎಂಬ ರೈತರ ಬೇಡಿಕೆಯನ್ನು ಒಪ್ಪಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಸದ ವರುಣ್ ಗಾಂಧಿ ಮನವಿ ಮಾಡಿದ್ದು, ಈ ಬೇಡಿಕೆ ಈಡೇರದಿದ್ದರೆ ರೈತರ ಪ್ರತಿಭಟನೆ ಕೊನೆಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಪ್ರಧಾನಿಯವರಿಗೆ ಪತ್ರ ಬರೆದಿರುವ ಅವರು, ಕೇಂದ್ರ ಸಚಿವ ಅಜಯ್ ಮಿಶ್ರಾ ಹೆಸರನ್ನು ಉಲ್ಲೇಖಿಸದೇ, ಲಖಿಂಪುರ- ಖೇರಿಯಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಪ್ರಕಟಿಸಿದ ಮೋದಿ ಅವರಿಗೆ ಧನ್ಯವಾದ ಹೇಳಿರುವ ಅವರು, 'ಮೊದಲೇ ಈ ನಿರ್ಧಾರ ತೆಗೆದುಕೊಂಡಿದ್ದರೆ, ಅನೇಕ ಅಮಾಯಕರ ಜೀವ ಉಳಿಯುತ್ತಿತ್ತು' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಎಂಎಸ್‌ಪಿಯನ್ನು ಶಾಸನಬದ್ಧಗೊಳಿಸಬೇಕು ಎಂಬ ರೈತರ ಬೇಡಿಕೆಯನ್ನು ಒಪ್ಪಿಕೊಳ್ಳುವ ಅಗತ್ಯವನ್ನು ಪತ್ರದಲ್ಲಿ ಒತ್ತಿ ಹೇಳಿರುವ ವರುಣ್, 'ಈ ಬೇಡಿಕೆ ಈಡೇರದೇ ರೈತರ ಚಳವಳಿ ಕೊನೆಗೊಳ್ಳುವುದಿಲ್ಲ. ಈಗಾಗಲೇ ಅವರಲ್ಲಿ ಈ ಬಗ್ಗೆ ವ್ಯಾಪಕವಾದ ಆಕ್ರೋಶವಿದೆ. ಅದು ಒಂದಲ್ಲ ಒಂದು ರೂಪದಲ್ಲಿ ಹೊರಹೊಮ್ಮುತ್ತಲೇ ಇರುತ್ತದೆ. ಆದ್ದರಿಂದ ರೈತರ ಬೇಡಿಕೆ ಈಡೇರಿಸಿ' ಎಂದು ಅವರು ಮನವಿ ಮಾಡಿದ್ದಾರೆ.
ಈ ರೈತ ಹೋರಾಟದಲ್ಲಿ ಮೃತಪಟ್ಟ ರೈತರ ಕುಟುಂಬದವರಿಗೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ಒದಗಿಸುವಂತೆ ಆಗ್ರಹಿಸಿರುವ ಅವರು, ಪ್ರತಿಭಟನನಿರತ ರೈತರ ಮೇಲೆ ರಾಜಕೀಯ ಪ್ರೇರಣೆಯಿಂದ ಹೂಡಿರುವ ಪ್ರಕರಣಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.