ನವದೆಹಲಿ: ದೆಹಲಿಯಲ್ಲಿ "ಅತ್ಯಂತ ಕಳಪೆ" ಗುಣಮಟ್ಟದ ಗಾಳಿಯೊಂದಿಗೆ ಬೆಳಕಿನ ಹಬ್ಬ ದೀಪಾವಳಿ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರ ರಾಜಧಾನಿಯ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ.
ವಾಯು ಮಾಲಿನ್ಯವನ್ನು ಲೆಕ್ಕಿಸದೆಯೇ ಪಟಾಕಿ ಸಿಡಿಸುತ್ತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಸಂಜೆ 4 ಗಂಟೆಗೆ ರಾಜಧಾನಿಯ ವಾಯು ಗುಣಮಟ್ಟ ಸೂಚ್ಯಂಕವು(ಎಕ್ಯೂಐ) 314 ರಷ್ಟಿತ್ತು. ಆದರೆ ಇಂದು ಬೆಳಗ್ಗೆ 8 ಗಂಟೆಗೆ ಅದು 341ಕ್ಕೆ ಏರಿಕೆಯಾಗಿದೆ.
ಶೂನ್ಯದಿಂದ 50ರ ನಡುವಿನ ಎಕ್ಯೂಐ ಇದಕ್ಕೆ ಅದು 'ಉತ್ತಮ' ಎಂದು, 51 ರಿಂದ 100 'ತೃಪ್ತಿದಾಯಕ', 101 ರಿಂದ 200 'ಮಧ್ಯಮ', 201 ರಿಂದ 300 'ಕಳಪೆ', 301 ರಿಂದ 400 'ಅತ್ಯಂತ ಕಳಪೆ' ಮತ್ತು 401 ರಿಂದ 500 ಅತ್ಯಂತ 'ತೀವ್ರ' ಎಂದು ಪರಿಗಣಿಸಲಾಗುತ್ತದೆ.
ನವೆಂಬರ್ 5 ಮತ್ತು 6 ರಂದು ಪಟಾಕಿಗಳನ್ನು ಸಿಡಿಸಿದರೆ ಗಾಳಿಯ ಗುಣಮಟ್ಟವು ಅತ್ಯಂತ 'ತೀವ್ರ' ಆಗಬಹುದು ಎಂದು ಎಸ್ ಎಎಫ್ ಎಆರ್ ಹೇಳಿದೆ. ಆದರೆ ಮಾದರಿ ಮುನ್ಸೂಚನೆಗಳ ಪ್ರಕಾರ ಎಕ್ಯೂಐ ಹೆಚ್ಚಾದರೂ ಅದು ಅತ್ಯಂತ "ತೀವ್ರ" ಮಟ್ಟಕ್ಕೆ ತಲುಪುವುದನ್ನು ಸೂಚಿಸುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.