ನವದೆಹಲಿ: ತ್ರಿಪುರಾದಲ್ಲಿ ನಡೆದಿದ್ದ ಕೋಮುಗಲಭೆಯ ತನಿಖೆಗೆ ಪೊಲೀಸರು ವಿಳಂಬ ಧೋರಣೆ ಅನುಸರಿಸುತ್ತಿರುವ ಕಾರಣ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ.
ನವದೆಹಲಿ: ತ್ರಿಪುರಾದಲ್ಲಿ ನಡೆದಿದ್ದ ಕೋಮುಗಲಭೆಯ ತನಿಖೆಗೆ ಪೊಲೀಸರು ವಿಳಂಬ ಧೋರಣೆ ಅನುಸರಿಸುತ್ತಿರುವ ಕಾರಣ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ.
ಈ ಸಂಬಂಧ ಎರಡು ವಾರದಲ್ಲಿ ಪ್ರತಿಕ್ರಿಯೆಯನ್ನು ದಾಖಲಿಸಲು ಸೂಚಿಸಿ ಕೇಂದ್ರ ಸರ್ಕಾರ ಮತ್ತು ತ್ರಿಪುರಾ ರಾಜ್ಯ ಸರ್ಕಾರಕ್ಕೆ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎ.ಎಸ್.ಬೋಪಣ್ಣ ಅವರಿದ್ದ ಪೀಠವು ನೋಟಿಸ್ ಜಾರಿ ಮಾಡಿತು.
ಅರ್ಜಿದಾರರಾದ ಎಥೆಶ್ಯಾಂ ಹಾಶ್ಮಿ ಅವರನ್ನು ಪ್ರತಿನಿಧಿಸಿದ್ದ ವಕೀಲ ಪ್ರಶಾಂತ್ ಭೂಷಣ್ ಅವರು, 'ಪೊಲೀಸರು ಈ ಪ್ರಕರಣವನ್ನು ಜಟಿಲಗೊಳಿಸುತ್ತಿದ್ದಾರೆ. ಹೀಗಾಗಿ, ಸ್ವತಂತ್ರ ತನಿಖೆಯು ಅಗತ್ಯವಾಗಿದೆ' ಎಂದು ಪ್ರತಿಪಾದಿಸಿದರು.
ದುರ್ಗಾಪೂಜೆಯ ಅವಧಿಯಲ್ಲಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಹಲ್ಲೆ ಪ್ರಕರಣಗಳು ನಡೆದಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ತ್ರಿಪುರಾದಲ್ಲಿ ಕೋಮುಗಲಭೆಯು ಸಂಭವಿಸಿತ್ತು. ಲೂಟಿ ಮತ್ತು ಹಿಂಸಾತ್ಮಕ ಕೃತ್ಯಗಳು ನಡೆದಿದ್ದವು.
'ಕೃತ್ಯ ನಡೆಸಿದವರ ಜೊತೆ ಪೊಲೀಸರೂ ಕೈಜೋಡಿಸಿದ್ದಾರೆ. ಗಲಭೆ ತಡೆಗೆ ಯತ್ನಿಸಲಿಲ್ಲ. ಇದುವರೆಗೆ ಒಬ್ಬರನ್ನೂ ಬಂಧಿಸಿಲ್ಲ. ಬದಲಾಗಿ, ರಾಜ್ಯದಲ್ಲಿ ಕೋಮುಗಲಭೆಯೇ ನಡೆಸಿಲ್ಲ ಎಂದು ಪ್ರತಿಪಾದಿಸಿದ್ದಾರೆ' ಎಂದು ಅರ್ಜಿದಾರರು ಹೇಳಿದ್ದರು.