ಕಾಸರಗೋಡು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಸಿದ್ದರೂ, ಕೇರಳದಲ್ಲಿ ತೆರಿಗೆ ಕಡಿತಗೊಳಿಸದಿರುವ ಕ್ರಮ ಖಂಡಿಸಿ ಸೋಮವಾರ ಕೆಪಿಸಿಸಿ ನಿರ್ದೇಶ ಪ್ರಕಾರ ಆಯೋಜಿಸಲಾಗಿದ್ದ ಚಕ್ರ ಸ್ತಂಬನ ಚಳವಳಿಗೆ ಕಾಸರಗೋಡಿನಲ್ಲಿ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಆಯೋಜಿಸಲಾಗಿದ್ದ ಕಾರ್ಯಕ್ರಮದನ್ವಯ ಕಾಸರಗೋಡು ಜಿಲ್ಲೆಯ ವಿದ್ಯಾನಗರದಲ್ಲಿ ಬೆಳಗ್ಗೆ 11ರಿಂದ 11.15ರ ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಆಹನ ತಡೆದು ಪ್ರತಿಭಟನೆ ನಡೆಸಲಾಯಿತು.
ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಡಿಸಿಸಿ ಅಧ್ಯಕ್ಷ ಪಿ.ಕೆ ಫೈಸಲ್ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡರಾದ ಕರುಣ್ ಥಾಪ, ಬಾಲಕೃಷ್ಣನ್ ಪೆರಿಯ, ಬಿ.ಪಿ ಪ್ರದೀಪ್ ಕುಮಾರ್, ಪಿ.ಜಿ ದೇವ್, ಪಿ.ಎ ಅಶ್ರಫಲಿ, ಕೆ.ಎ ಖಾಲಿದ್, ಸಾಜಿದ್ ಮವ್ವಲ್, ಅರ್ಜುನನ್ ತಾಯಲಂಗಾಡಿ, ವಿನೋದ್ ಕುಮಾರ್ ನೇತೃತ್ವ ವಹಿಸಿದ್ದರು. ಕೇಂದ್ರ ಸರ್ಕಾರ ಪ್ರತಿ ಲೀ. ಡೀಸೆಲ್‍ಗೆ 10ರೂ. ಹಾಗೂ ಪೆಟ್ರೋಲ್‍ಗೆ 5ರೂ ಕಡಿತಗೊಳಿಸಿದ್ದರೂ, ಕೇರಳ ಸರ್ಕಾರ ತೆರಿಗೆ ಇಳಿಸಲು ನಿರಾಕರಿಸಿರುವುದನ್ನು ಪ್ರತಿಭಟಿಸಿ ಕೆಪಿಸಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನೂರಾರು ಮಂದಿ ಕಾರ್ಯಕರ್ತರು ಚಕ್ರಸ್ತಂಬನ ಪ್ರತಿಭಟನೆಯಲ್ಲಿ ಪಲ್ಗೊಂಡು ಕೇರಳ ಸರ್ಕಾರದ ಧೋರಣೆ ಖಂಡಿಸಿದರು.