ತಿರುವನಂತಪುರ: ಇಂಧನ ತೆರಿಗೆ ಇಳಿಸದ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಯುಡಿಎಫ್ ಶಾಸಕರು ಸೈಕಲ್ ಸವಾರಿ ನಡೆಸಿ ವಿನೂತನ ಪ್ರತಿಭಟನೆ ನಡೆಸಿದರು. ವಿಧಾನಸಭೆ ಅಧಿವೇಶನದ ಕೊನೆಯ ದಿನವಾದ ಇಂದು ಕಾಂಗ್ರೆಸ್ ಶಾಸಕರು ಸೈಕಲ್ ತುಳಿದು ವಿಧಾನಸಭೆಗೆ ತೆರಳಿ ಕೇಂದ್ರ ಸರ್ಕಾರ ತೆರಿಗೆ ಇಳಿಕೆ ಮಾಡಿದರೂ ಕೇರಳದಲ್ಲಿ ಒಂದು ಪೈಸೆಯನ್ನೂ ಇಳಿಸದಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಪ್ರತಿಪಕ್ಷದ ನಾಯಕ ವಿ.ಡಿ.ಸತೀಶನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಕ್ಯಾಂಪ್‍ನಲ್ಲಿರುವ ಶಾಸಕರ ವಸತಿ ನಿಲಯದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ವಿಧಾನಸಭೆಯವರೆಗೂ ನಡೆಯಿತು. ಪ್ರತಿಭಟನಾ ಮೆರವಣಿಗೆಯಲ್ಲಿ ಕಾಂಗ್ರೆಸ್ ಜೊತೆಗೆ ಘಟಕ ಪಕ್ಷಗಳ ಪ್ರತಿನಿಧಿಗಳೂ ಪಾಲ್ಗೊಂಡಿದ್ದರು. ಕೇಂದ್ರ ಸರ್ಕಾರ ಬೆಲೆ ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ರಾಜ್ಯದಲ್ಲೂ ತೆರಿಗೆ ಇಳಿಸಲು ತೀವ್ರ ಪ್ರತಿಭಟನೆಗಿಳಿದಿದೆ.
ಕಾಂಗ್ರೆಸ್ ಶಾಸಕ ಕೆ. ಬಾಬು ಅವರು ತುರ್ತು ನಿರ್ಣಯಕ್ಕೆ ನೋಟಿಸ್ ಜಾರಿ ಮಾಡಿದರು. ಪ್ರತಿಪಕ್ಷಗಳು ತೆರಿಗೆ ಕಡಿತಕ್ಕೆ ಒತ್ತಾಯಿಸಿದಾಗ, ಇತರ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ತೆರಿಗೆಯನ್ನು ಕಡಿಮೆ ಮಾಡಲಿಲ್ಲ ಎಂದು ಸಿಪಿಎಂ ವಾಗ್ವಾದಕ್ಕಿಳಿಯಿತು. ಆದರೆ ಪಂಜಾಬ್ ಸೇರಿದಂತೆ ಹಲವಾರು ಕಾಂಗ್ರೆಸ್ ರಾಜ್ಯಗಳಲ್ಲಿ ತೆರಿಗೆಗಳನ್ನು ಕಡಿಮೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಯುಡಿಎಫ್ ಶಾಸಕರು ಸೈಕಲ್ ಏರಿ ಪ್ರತಿಭಟನೆ ನಡೆಸಿದರು ಎಂದು ವಿ.ಡಿ.ಸತೀಶನ್ ಉತ್ತರ ನೀಡಿದರು.